ವಿಟ್ಲ, ಸೆ 23(SM): ವಿಟ್ಲ ಸಮೀಪದ ಕನ್ಯಾನದ ರಕ್ಷಿತಾರಣ್ಯಕ್ಕೆ ಅಗ್ನಿ ತಗುಲಿದ್ದು, ಅಪಾರ ಗಿಡ ಮರಗಳು ಬೆಂಕಿಗಾಹುತಿಯಾಗಿವೆ. ಕನ್ಯಾನದ ಕಲಂಜಿಮಲೆ ರಕ್ಷಿತಾರಣ್ಯದಲ್ಲಿ ಅನಾಹುತ ಸಂಭವಿಸಿದೆ.
ಇನ್ನು ಕಾಡ್ಗಿಚ್ಚಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಯುವಕರ ತಂಡವೊಂದು ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಇದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೂ ಸುದ್ದಿ ರವಾನಿಸಿದ್ದಾರೆ. ಆಕಸ್ಮಿಕವಾಗಿ ಬೆಂಕಿ ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಬಿಸಿಲ ತಾಪಮಾನ ಏರಿಕೆಯಾಗಿದ್ದು, ಇದರಿಂದಾಗಿ ಬೆಂಕಿ ತಗುಲಿರಬಹುದು ಎಂದು ಸ್ಥಳೀಯರು ಗುಮಾನಿ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.