ಚಿತ್ರದುರ್ಗ, ಸೆ 24 (MSP): ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ, ರೆಬಲ್ ಆಗಿ ಓಡಾಡುತ್ತಿರುವ ಕಾಂಗ್ರೆಸ್ ಪಕ್ಷದ ಶಾಸಕ ಬಿ.ಸಿ ಪಾಟೀಲ್ ಹಲವಾರು ಬಾರಿ ತಮ್ಮ ಅಸಮಧಾನವನ್ನು ಹೊರಹಾಕಿದ್ದರು. ದೋಸ್ತಿ ಸರ್ಕಾರ, ಸಚಿವ ಸಂಪುಟ ವಿಸ್ತರಣೆ ನಾಳೆ ಬಾ ಅನ್ನೋ ಕಥೆಯಂತಿದೆ, ನನಗೆ ನಿಗಮವೂ ಬೇಡ, ಮಂಡಳಿಗಳೂ ಬೇಡ, ಕೊಡುವುದಾದರೆ ಮಂತ್ರಿ ಸ್ಥಾನ ನೀಡಲಿ, ಲಿಂಗಾಯತ ವೀರಶೈವ ಸಮಾಜಕ್ಕೆ ಮಂತ್ರಿ ಮಂಡಲದಲ್ಲಿ ಅವಕಾಶ ನೀಡಿಲ್ಲ ಎನ್ನೋ ಹೇಳಿಕೆಗಳ ಮೂಲಕ ಹಲವಾರು ಬಾರಿ ಬಿ.ಸಿ ಪಾಟೀಲ್ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದರು.
ಇದೆಲ್ಲದರ ಮದ್ಯೆ ಸರ್ಕಾರದಲ್ಲಿ ಅಸ್ಥಿರತೆ ಉಂಟಾದಾಗ ಆಪರೇಷನ್ ಕಮಲದ ಸುದ್ದಿ ಹೆಚ್ಚಾಗಿಯೇ ಕೇಳಿಬಂದಿತ್ತು. ತಾನು ಬಿಜೆಪಿಗೆ ಸೇರುವುದಿಲ್ಲ ಎಂಬ ಹೇಳಿಕೆ ನೀಡಿದರೂ ಪಾಟೀಲರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಆಕ್ರೋಶ ಮಾತ್ರ ಇನ್ನು ತಣ್ಣಾಗಿಲ್ಲ. ಇವೆಲ್ಲದರ ನಡುವೆ ಶಾಸಕ ಬಿ.ಸಿ ಪಾಟೀಲ್ ಚಿತ್ರದುರ್ಗದಲ್ಲಿ ಕಾರ್ಯಕ್ರಮವೊಂದಕ್ಕೆ ತೆರಲಿದ್ದ ವೇಳೆ ಅವರು ಸಂಚರಿಸುತ್ತಿದ್ದ ಕಾರನ್ನು ರಾತ್ರಿ ವೇಳೆ ಅಡ್ಡಗಟ್ಟಿದ ಬಿಜೆಪಿ ಪಕ್ಷದ ಕಾರ್ಯಕರ್ತರು, ಗೌರವ ಇಲ್ಲದ ಪಕ್ಷದಲ್ಲಿ ಯಾಕೆ ಇದ್ದೀರಾ? ಅದರ ಬದಲು ಕೈ ಪಕ್ಷ ತೊರೆದು ಯಡಿಯೂರಪ್ಪ ಅವರನ್ನು ಬೆಂಬಲಿಸಿ ಬಿಜೆಪಿ ಪಕ್ಷವನ್ನು ಸೇರಿ ಎಂದು ಒತ್ತಾಯಿಸಿದ ಘಟನೆ ನಡೆದಿದೆ.
ಶಾಸಕ ಬಿ.ಸಿ ಪಾಟೀಲ್ ಅವರು ಸೆ.23 ರ ಭಾನುವಾರ ರಾತ್ರಿ ಚಿತ್ರದುರ್ಗದ ಸಿರಿಗೆರೆಯ ತರಳಬಾಳು ಬೃಹನ್ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹಿಂತಿರುಗುತ್ತಿದ್ದರು. ಇದೇ ಸಂದರ್ಭ ಅವರ ಕಾರನ್ನು ಅಡ್ಡಗಟ್ಟಿದ್ದ ಬಿಜೆಪಿಗರು ಬಿಜೆಪಿ ಸೇರ್ಪಡೆಗೊಳ್ಳುವಂತೆ ಒತ್ತಾಯಿಸಿದ್ದಾರೆ. " ಬಿ.ಸಿ ಪಾಟೀಲ್ ಅಣ್ಣ ಬಿಜೆಪಿ ಸೇರಣ್ಣ. ಯಡಿಯೂರಪ್ಪ ಜತೆಗಿರಿ ಅಣ್ಣ. ಯಡಿಯೂರಪ್ಪಗೆ ಜೈ, ಬಿ.ಸಿ ಪಾಟೀಲ್ಗೆ ಜೈ " ಎಂದು ಎಂದು ಘೋಷಣೆ ಬೇರೆ ಕೂಗಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಪೊಲೀಸರು, ಕಾರನ್ನು ಅಡ್ಡಗಟ್ಟಿದ್ದ ಜನರನ್ನು ಹರಸಾಹಸಪಟ್ಟು ಚದುರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.