ವಯನಾಡ್, ಸೆ 24 (MSP): ಕ್ರೈಸ್ತ ಸನ್ಯಾಸಿನಿಯ ಮೇಲೆ ಎರಡು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಹೊತ್ತಿರುವ ಕೇರಳ ಮೂಲದ,ಬಿಷಪ್ ಫ್ರಾಂಕೋ ಮುಳಕ್ಕಲ್ ಬಂಧನಕ್ಕೆ ಒತ್ತಾಯಿಸಿ ಕೊಚ್ಚಿಯಲ್ಲಿ ನಡೆದ ಕ್ರೈಸ್ತ ಸನ್ಯಾಸಿಯರ ಪ್ರತಿಭಟನೆಯಲ್ಲಿ ಭಾಗವಹಿಸಿದ ಭಗಿನಿಯೊಬ್ಬರಿಗೆ ಚರ್ಚ್ ಕರ್ತವ್ಯದಿಂದ ದೂರವಿರುವಂತೆ ಆದೇಶ ನೀಡಿದ್ದು ಇದೀಗ ಆಕ್ಷೇಪಕ್ಕೆ ಕಾರಣವಾಗಿದೆ.
ವಯನಾಡಿನ ಸಿರೋ ಮಲಬಾರ್ ಕ್ಯಾಥೋಲಿಕ್ ಚರ್ಚ್ ಗೆ ಸೇರಿದ್ ಅಲೂಸಿ ಕಲಪುರ ಅವರಿಗೆ ಮದರ್ ಸುಪೀರಿಯರ್ ಅವರು ಮೌಖಿಕವಾಗಿ ಸೂಚನೆ ನೀಡಿ ಪ್ರಾರ್ಥನೆ, ತರಗತಿ ಸೇರಿದಂತೆ ಚರ್ಚ್ ಸಂಬಂಧಿತ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದಂತೆ ಸೂಚಿಸಿದ್ದಾರೆ. ಆದರೆ ಈ ಕ್ರಮ ಯಾವ ಕಾರಣಕ್ಕೆ? ಯಾಕಾಗಿ ಕರ್ತವ್ಯದಿಂದ ದೂರ ಇರಬೇಕು ಎನ್ನುವ ಕುರಿತು ಯಾವುದೇ ವಿವರಣೆ ನೀಡಿಲ್ಲ. ಈ ನಡುವೆ ಸಿಸ್ಟರ್ ಲೂಸಿ ಅವರ ವಿರುದ್ದ ಮೂರು ತಿಂಗಳ ಹಿಂದೆಯೇ ಶಿಸ್ತು ಕ್ರಮ ಕೈಗೊಳ್ಳುವಂತೆ ಮಾನಂತವಾಡಿ ಧರ್ಮಕ್ಷೇತ್ರ ಶಿಫಾರಸ್ಸು ಮಾಡಿತ್ತು ಎಂದು ಮಾಧ್ಯಮಗಳು ವರದಿ ಮಾಡಿದೆ. ಸಾಲ ಮಾಡಿ ಕಾರು ಖರೀದಿ, ಕ್ರೈಸ್ತ ಸನ್ಯಾಸಿನಿಯರ ಸಮವಸ್ತ್ರ ಧರಿಸಿದೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚ್ ವಿರುದ್ದ ಹೇಳಿಕೆ ನೀಡಿದ್ದರಿಂದ ಆಕೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಕೆಲವು ಮಾದ್ಯಮಗಳಲ್ಲಿ ವರದಿಯಾಗಿದೆ. ಆದರೆ ಭಗಿನಿ ಲೂಸಿ ಈ ಆರೋಪಗಳನ್ನು ನಿರಾಕರಿಸಿದ್ದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇ ಆದೇಶಕ್ಕೆ ಕಾರಣ ಎಂದಿದ್ದಾರೆ.
ಈ ನಡುವೆ ಎರಡು ದಿನಗಳ ಅವಧಿಗಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಬಂಧಿತ ಬಿಷಪ್ ಫ್ರಾಂಕೋ ಮುಳಕ್ಕಲ್ ಅವರನ್ನು ಅಪರಾಧ ಕೃತ್ಯದ ಮರುಸೃಷ್ಟಿಗಾಗಿ ಭಾನುವಾರ ಕುರವಿಲಂಗಾಡುವಿನ ಅತಿಥಿ ಗೃಹಕ್ಕೆ ಕರೆದೊಯ್ಯಲಾಯಿತು. ಇನ್ನೂ ತಪ್ಪೊಪ್ಪಿಗೆ ಹೇಳಿಕೆ ನೀಡಲ್ಲದ್ದರಿಂದ ಮುಳಕ್ಕಲ್ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಅವಕಾಶ ನೀಡುವಂತೆ ಪೊಲೀಸರು ಕೋರ್ಟ್ ಮೊರೆ ಹೋಗುವ ಬಗ್ಗೆ ಚಿಂತನೆ ನಡೆಸಿದ್ದಾರೆ.