ಬೆಂಗಳೂರು, ಸೆ 24 (MSP): ಜಿಮ್ ತರಬೇತುದಾರ ಮಾರುತಿ ಗೌಡ ಎಂಬುವರನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ನಟ ದುನಿಯಾ ವಿಜಯ್ ಮತ್ತು ಮೂವರು ಸಹಚರರು ಜೈಲು ಪಾಲಾಗಿದ್ದು, ಪರಪ್ಪನ ಆಗ್ರಹಾರ ಜೈಲಲ್ಲಿ ಮೊದಲ ರಾತ್ರಿ ಕಳೆದಿದ್ದಾರೆ. ಆದರೆ ಇವೆಲ್ಲದಕ್ಕಿಂತಲೂ ಹೆಚ್ಚು ನಟ ದುನಿಯಾ ವಿಜಯ್ ಹೆಂಡತಿಯರ ಕಿರಿಕ್ ಗೆ ಸಖತ್ ಟೆನ್ಷನ್ ಮಾಡಿಕೊಂಡಿದ್ದು, ರಾತ್ರಿಯಿಡೀ ಇದೇ ವಿಚಾರವಾಗಿಯೇ ದುನಿಯಾ ವಿಜಯ್ ತಲೆಕೆಡಿಸಿಕೊಂಡಿದ್ದು ನಿದ್ರೆ ಇಲ್ಲದೆ ಕಾಲ ಕಳೆದಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.
ವಿಜಿ ಬಂಧನವಾಗುತ್ತಿದ್ದಂತೆ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ತನ್ನ ಪುತ್ರನನ್ನು ನೋಡಲೆಂದು ವಿಜಯ್ ಮನೆಗೆ ತೆರಳಿದ್ದಾಗ ಎರಡನೇ ಪತ್ನಿ ಕೀರ್ತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಗೂಂಡಾಗಳನ್ನ ಛೂ ಬಿಟ್ಟು ಬೆದರಿಸಿದ್ದಾರೆ. ತನಗೆ ನ್ಯಾಯ ಬೇಕು, ಮಕ್ಕಳು ಬೇಕು ಎಂದು ನಾಗರತ್ನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಮೂವರು ಮಕ್ಕಳನ್ನ ನನ್ನಿಂದ ದೂರ ಮಾಡಿ ಹಾಳು ಮಾಡುತ್ತಿದ್ದಾರೆ. ನನ್ನ ಮಗ ಹೇಗಿದ್ದಾನೆ ಅಂತಾ ನೋಡಲು ಹೋದಾಗ ನನ್ನ ಮೇಲೆ ಇಬ್ಬರು ಬೌನ್ಸರ್ ಜೊತೆ ಸೇರಿ ಕೀರ್ತಿ ಹಲ್ಲೆ ನಡೆಸಿದ್ದಾರೆ ಎಂದು ನಾಗರತ್ನ ದೂರು ನೀಡಿದ್ದಾರೆ. ನಾಗರತ್ನ ಅವರ ದೂರಿನ ಆಧಾರದ ಮೇಲೆ ಕೀರ್ತಿ ವಿರುದ್ಧ ಪೊಲೀಸರು 323, 504 ,506 34 ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಹಲ್ಲೆ, ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಇದೇ ವಿಚಾರವಾಗಿ ಕೀರ್ತಿಯನ್ನ ಠಾಣೆಗೆ ಕರೆಸಿಕೊಂಡ ಪೊಲೀಸರು ವಿಚಾರಣೆ ನಡೆಸಿದರು. ಈ ಸಂದರ್ಭ ನಾಗರತ್ನಾ ಅವರೇ ನನ್ನ ಮೇಲೆ ಹಲ್ಲೆ ನಡೆಸಿದ್ರು ಎಂದು ಕೀರ್ತಿ ಆರೋಪಿಸಿದರು. ಬಳಿಕ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಕೀರ್ತಿಯನ್ನು ಕಳುಹಿಸಿಕೊಟ್ಟರು.
ಇತ್ತ ಭಾನುವಾರ ರಾತ್ರಿ ಜೈಲಿನಲ್ಲಿ ಸುಮಾರು 2 ಗಂಟೆ ಗಳ ಕಾಲ ಪ್ರಕರಣದ ಬಗ್ಗೆ ಸಹಚರರ ಬಳಿ ಚರ್ಚೆ ನಡೆಸಿದ ವಿಜಿ, ಬಳಿಕ ಸ್ವಲ್ಪ ಹೊತ್ತು ನಿದ್ರೆಗೆ ಜಾರಿದ್ರು, ನಂತರ ಮತ್ತೆ ವಿಜಯ್ ಎಚ್ಚರಗೊಂಡ ಮತ್ತೆ ಸಹಚರರ ಜೊತೆ ಮಾತನಾಡಿದ್ದಾರೆ. ಈ ಸಂದರ್ಭ ಎಲ್ಲಾ ಪ್ರಕರಣಕ್ಕಿಂತ ಹೆಚ್ಚು ಕೋಪ ತಂದಿರೋದು ಪತ್ನಿಯರ ಜಗಳ ಎಂದು ಹೇಳಿದರು ಎನ್ನಲಾಗಿದೆ. ಕಷ್ಟ ಬಂದ್ರೆ ಎಲ್ಲವೂ ಜತೆಯಾಗಿ ಬರುತ್ತವೆ ಎಂದು ತಲೆಕೆಡಿಸಿಕೊಂಡಿರೋ ದುನಿಯಾ ವಿಜಯ್ , ಜಾಮೀನು ಸಿಗುತ್ತದೆಯೋ ಇಲ್ಲವೋ ಎಂಬ ಟೆನ್ಷನ್ ಒಂದೆಡೆಯಾದರೆ ಈ ಹಿಂದಿನ ಪ್ರಕರಣಗಳೆಲ್ಲಾ ದಾಖಲಿಸಿ ಪೊಲೀಸರು ರೌಡಿ ಶೀಟರ್ ಪಟ್ಟಿ ತೆರೆದರೆ ಆತಂಕ ಇನ್ನೊಂದೆಡೆ. ಇವೆಲ್ಲದರ ನಡುವೆ ಹೆಂಡತಿಯರಿಬ್ಬರ ಜಗಳ ಠಾಣೆ ಮೆಟ್ಟಿಲೇರಿರುವುದು ದುನಿಯಾ ವಿಜಯ್ ನ್ನು ಕಂಗಾಲಾಗಿಸಿದೆ.