ಉಡುಪಿ, ಸೆ 24 (MSP): ಹೊಟ್ಟೆಗೆ ಚಾಕು ಚುಚ್ಚಿಕೊಂಡು ಮಾಜಿ ನೌಕಾದಳ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ 23 ರ ಭಾನುವಾರ ತಡ ರಾತ್ರಿ ಮಣಿಪಾಲದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಮಾಜಿ ನೌಕಾದಳ ಅಧಿಕಾರಿ ಒಲಿವೆರಾ ಲೂಯಿಸ್ (68) ಎಂದು ಗುರುತಿಸಲಾಗಿದೆ.
ಉಡುಪಿಯ ತೋನ್ಸೆ ಮೂಲದವರಾದ ಇವರು ನಿನ್ನೆ ತಡ ರಾತ್ರಿ ಮಣಿಪಾಲದದ ಪೆರಂಪಳ್ಳಿ ರಸ್ತೆಯಲ್ಲಿ ತನ್ನ ಪತ್ನಿಯ ತಂಗಿ ಮನೆಯ ಸಮೀಪ, ತಮ್ಮ ಫೋರ್ಡ್ ಕಾರಿನಲ್ಲಿ ಹೊಟ್ಟೆಗೆ ಚಾಕುವಿನಿಂದ ಚುಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಿನಲ್ಲಿ ಪತ್ನಿಗೆ ಬರೆದ ಡೆತ್ ನೋಟ್ ದೊರಕಿದ್ದು ನನ್ನ ಸಾವಿಗೆ ನಾನೇ ಕಾರಣ ಹಾಗೂ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸೂಸೈಡ್ ನೋಟ್ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರ್ಗಿ ,ಎಡಿಷನಲ್ ಎಸ್ಪಿ ಕುಮಾರಚಂದ್ರ, ಮತ್ತಿತ್ತರ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಆಸ್ಪತ್ರೆಗೆ ರವಾನಿಸಲಾಗಿದೆ.
ಒಲಿವೆರಾ ಲೂಯಿಸ್ ಶಿಪ್ ಕ್ಯಾಪ್ಟನ್ ಆಗಿದ್ದು ನಿವೃತ್ತರಾದ ಬಳಿಕ ಬಿಲ್ಡರ್ ಉದ್ಯಮ ನಡೆಸುತ್ತಿದ್ದರು. ಒಲಿವೆರಾ ಖಿನ್ನತೆಯಿಂದ ಬಳಲುತ್ತಿದ್ದು, ಉದ್ಯಮದ ನಷ್ಟ ಅನುಭವಿಸಿದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇನ್ನು ಕಾರಿನಲ್ಲಿ ಆತ್ಮಹತ್ಯೆಗೆ ಬಳಸಿದ ಆಯುಧ ಪತ್ತೆಯಾಗಿಲ್ಲ. ಹೀಗಾಗಿ ಇದು ಅತ್ಮಹತ್ಯೆಯೋ ಅಥವಾ ಕೊಲೆ ಎಂಬ ಶಂಕೆ ಉದ್ಬವವಾಗಿದೆ. ಮಣಿಪಾಲ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.