ಉಡುಪಿ, ಸೆ 25 (MSP): ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆ ಎದುರಿಸಲು ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಚುನಾವಣೆಗಾಗಿ ದೇಶದಾದ್ಯಂತ ಸಾರ್ವಜನಿಕರಿಂದ ನಿಧಿ ಸಂಗ್ರಹ ಮಾಡಲಿದ್ದೇವೆ. ಈ ಲೋಕ ಸಂಪರ್ಕ್ ಅಭಿಯಾನ ಅ. 2 ರಿಂದ ನವೆಂಬರ್ 19 ರ ವರೆಗೆ ನಡೆಯಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಪಿ.ಸಿ. ವಿಷ್ಣುನಾಥನ್ ತಿಳಿಸಿದ್ದಾರೆ.
ಅವರು ಅಜ್ಜರಕಾಡಿನ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಸೆ೨೪ರ ಸೋಮವಾರ ಭೇಟಿ ನೀಡಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ರಾಷ್ಟ್ರೀಯ ಕಾಂಗ್ರೆಸ್ ಈ ಬಾರಿ ಶಕ್ತಿ ಪ್ರದರ್ಶನ, 18 ರಿಂದ 21 ರ ವಯೋಮಾನದ ಮತದಾರರನ್ನು ಪಕ್ಷಕ್ಕೆ ಸೆಳೆಯುವ ಹಾಗೂ ಸೇರ್ಪಡೆಗೊಳಿಸಲು ಮತ್ತು ಲೋಕ ಸಂಪರ್ಕ್ ಅಭಿಯಾನದಂತಹ ಪ್ರಮುಖ 3 ಅಜೆಂಡಾ ಇಟ್ಟುಕೊಂಡಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಕಾಂಗ್ರೆಸ್ಗೆ ಚುನಾವಣೆ ಎದುರಿಸಲು ಹಣದ ಕೊರತೆ ಇದೆ. ಆದರೆ ಬಿಜೆಪಿಗೆ ಫಂಡಿಂಗ್ ಮಾಡಲು ಅದಾನಿ, ಅಂಬಾನಿ ಇದ್ದಾರೆ. ರಫೇಲ್ನಂತಹ ಬಹುಕೋಟಿ ಹಗರಣದ ಹಣವಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಪೋರೇಟ್ ಸಂಸ್ಥೆಗಳಿಂದ ನಿಧಿ ಸಂಗ್ರಹ ಮಾಡದೆ ಸಾರ್ವಜನಕರಿಂದ ನಿಧಿ ಸಂಗ್ರಹಕ್ಕೆ ಮುಂದಾಗಿದೆ. ಎಲ್ಲರಿಗೂ ರಶೀದಿ ನೀಡಿಯೇ ಹಣ ಪಡೆಯುತ್ತೇವೆ. ಎಲ್ಲವೂ ಪಾರದರ್ಶಕವಾಗಿರುತ್ತದೆ ಎಂದರು.
ಸಾರ್ವಜನಿಕರಿಂದ ಸಂಗ್ರಹಿಸುವ ಹಣದಲ್ಲಿ ಶೇ. 50 ಎಐಸಿಸಿಗೆ, ತಲಾ ಶೇ. 15 ರಂತೆ ಜಿಲ್ಲಾ ಹಾಗೂ ರಾಜ್ಯ ಕಾಂಗ್ರೆಸ್ ಹಾಗೂ ಶೇ. 20 ಬ್ಲಾಕ್ ಕಾಂಗ್ರೆಸ್ಗೆ ಹಂಚಿಕೆ ಮಾಡಲಾಗುವುದು. ಪ್ರತಿ ಬೂತ್ನಲ್ಲೂ ಸಹಯೋಗಿಗಳನ್ನು ನಿಯೋಜಿಸಿ ತಲಾ ಒಬ್ಬರಿಗೆ 25 ಮನೆಗಳ ಜವಾಬ್ದಾರಿಯನ್ನು ಹಂಚಿಕೆ ಮಾಡುತ್ತೇವೆ. ಇವರಿಗೆ 100, 500, 1000 ರೂ. ಕೂಪನ್ ಹಾಗೂ ಕರಪತ್ರಗಳನ್ನು ನೀಡಿ, ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡಲಾಗುವುದೆಂದರು.ಪ್ರತಿ ಬ್ಲಾಕ್ನಲ್ಲಿ ನಿಯೋಜಿಸಿದ ಸಹಯೋಗಿಗಳು ತಮಗೆ ನೀಡಿದ ಮನೆಗಳಿಗೆ ಸಮ್ಮಿಶ್ರ ಸರಕಾರದ ಯೋಜನೆ ಹಾಗೂ ಕೇಂದ್ರ ಸರಕಾರದ ವೈಫಲ್ಯವನ್ನು ಮನದಟ್ಟು ಮಾಡಿಸಲಿದ್ದಾರೆ. ರಫೇಲ್ ಹಗರಣದ ವಿರುದ್ಧ ನಡೆದ ಹೋರಾಟ ಹಾಗೂ ಭಾರತ್ ಬಂದ್ ಉಡುಪಿಯಲ್ಲಿ ಯಶಸ್ಸಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ ಮಾತನಾಡಿ, ಅ. 2 ರಿಂದ ಅಕ್ಟೋಬರ್ ಅಂತ್ಯದೊಳಗೆ ಸಹಯೋಗಿಗಳನ್ನು ಗುರುತಿಸಿ ಕಾರ್ಯಕರ್ತರನ್ನು ಸೇರ್ಪಡೆ ಮಾಡಬೇಕಿದೆ. ಭಾನುವಾರ ಪ್ರದೇಶ ಕಾಂಗ್ರೆಸ್ ಸಮಿತಿ ಪಕ್ಷ ಸಂಘಟನೆಗಾಗಿ ಜನರ ನಿರಂತರ ಸಂಪರ್ಕದಲ್ಲಿರುವ ಯುವ ಮುಖಂಡರನ್ನು ನೋಡಿಕೊಂಡು ಬ್ಲಾಕ್ ಕಾಂಗ್ರೆಸ್ನ್ನು ಪುನರ್ ರಚನೆ ಮಾಡಲು ಖಡಕ್ ಸೂಚನೆ ಕೊಟ್ಟಿದೆ ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಭಂಡಾರಿ, ಜಿ.ಎ.ಬಾವಾ, ಬಿ. ನರಸಿಂಹ ಮೂರ್ತಿ, ಮಮತಾ ಗಟ್ಟಿ, ನವೀನ್ ಡಿಸೋಜ, ಎಂ.ಎಸ್. ಮೊಹಮ್ಮದ್, ಕಳ್ಳಿಗೆ ತಾರಾನಾಥ ಶೆಟ್ಟಿ, ಕೃಷ್ಣರಾಜ ಸರಳಾಯ, ದಿವಾಕರ ಶೆಟ್ಟಿ ಕಾಪು, ಅಶೋಕ ಕೊಡವೂರು, ಮನೋಜ್, ಇಸ್ಮಾಯಿಲ್ ಆತ್ರಾಡಿ, ಯತೀಶ್ ಕರ್ಕೇರ, ಸತೀಶ್ ಅಮೀನ್ ಪಡುಕರೆ, ನಿತ್ಯಾನಂದ ಶೆಟ್ಟಿ, ಶಿವರಾಮ ಶೆಟ್ಟಿ, ಸುೀರ್ ಹೆಗ್ಡೆ, ನೀರೆಕೃಷ್ಣ ಶೆಟ್ಟಿ, ಸುಧಾಕರ್ ಕೋಟ್ಯಾನ್, ಸಂಜೀವ ಶೆಟ್ಟಿ, ಗೀತಾ ವಾಗ್ಲೆ, ಹರೀಶ್ ಕಿಣಿ, ನವೀನ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.