ಬೆಂಗಳೂರು, ಸೆ 25 (MSP): ರಾಜ್ಯದ ಶಾಲಾ ಮಕ್ಕಳು ಮಧ್ಯಾಹ್ನದ ಬಿಸಿಯೂಟ, ಬಿಸಿ ಹಾಲು ಸೇವಿಸುವುದರೊಂದಿಗೆ ಇನ್ಮುಂದೆ ಸಿಹಿಯನ್ನು ಸವಿಯಲಿದ್ದಾರೆ. ಅದರೆ ಇದು ಸಾಮಾನ್ಯ ಸಿಹಿಯಲ್ಲ " ಸವಿಜೇನಿನ ಸಿಹಿ". ಹೌದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಮಕ್ಕಳ ಆರೋಗ್ಯವೃದ್ದಿಗಾಗಿ ಜೇನುತುಪ್ಪ ನೀಡುವಂತೆ ಆದೇಶ ನೀಡಿದ್ದು ಈ ಹಿನ್ನಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಬಿಸಿಯೂಟದ ಜತೆಯಲ್ಲಿ ಜೇನುತುಪ್ಪ ನೀಡಲು ಮುಂದಾಗಿದೆ. ಪೌಷ್ಟಿಕಾಂಶಯುಕ್ತ ಜೇನುತುಪ್ಪ ನೀಡಲು ರಾಜ್ಯಗಳಿಗೆ ಕೇಂದ್ರ ಸೂಚನೆ ನೀಡಿದಂತೆ , ಕೆಲವು ಪ್ರಕ್ರಿಯೆ ನಂತರ ಈ ಯೋಜನೆ ಜಾರಿ ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯೂ ಈ ಸಂಬಂಧ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿದ್ದು, ಜೇನುತುಪ್ಪ ಮಕ್ಕಳಿಗೆ ಶಕ್ತಿ ನೀಡುವುದಲ್ಲದೆ ಸಣ್ಣ ಮಟ್ಟಿನ ಹಸಿವನ್ನು ನಿಯಂತ್ರಿಸುವ ವಿಶೇಷ ಗುಣ ಜೇನುತುಪ್ಪದಲ್ಲಿದೆ. ಇದಲ್ಲದೆ ಜೀವಸತ್ವಗಳು ಖನಿಜ, ಪ್ರೊಟೀನ್ ಮತ್ತು ಒಳ್ಳೆಯ ಅಮಿನೊ ಆಮ್ಲಗಳು ಜೇನಿನಲ್ಲಿದೆ. ಜೇನುತುಪ್ಪ ನಿರಂತರವಾಗಿ ಸೇವನೆ ಮಾಡುತ್ತಾ ಬಂದ್ರೆ ಮಕ್ಕಳು ಬ್ಯಾಕ್ಟೀರಿಯಾ ಮತ್ತು ಸೋಂಕು, ಶೀತ, ಕಫ, ಅಲರ್ಜಿಗಳಿಗೆ ತುತ್ತಾಗುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಇದರೊಂದಿಗೆ ದೇಹದಲ್ಲಿ ರಕ್ತದ ಮಟ್ಟವನ್ನು ನಿಯಂತ್ರಿಸುವಲ್ಲಿ ಕೂಡ ಸವಿಜೇನು ಸಹಾಯ ಮಾಡುತ್ತದೆ ಎಂದು ವಿವರಣೆ ನೀಡಲಾಗಿದೆ.
ರಾಷ್ಟ್ರೀಯ ಜೇನುಹುಳ ನಿಗಮದ ಕಾರ್ಯದಡಿಯಲ್ಲಿ ಬರುವ ಕೇಂದ್ರ ಕೃಷಿ ಮತ್ತು ರೈತರ ಅಭಿವೃದ್ಧಿ ಸಚಿವಾಲಯದ ಸೂಚನೆಯಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಅಧಿಸೂಚನೆ ಹೊರಡಿಸಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಸರ್ಕಾರ, ಯೋಜನೆ ಉತ್ತಮವಾಗಿದ್ದು ಆದರೆ ಇದನ್ನು ಅನುಷ್ಟಾನ ಮಾಡುವುದು ಹೇಗೆ ಎಂಬ ಯೋಚನೆಯಲ್ಲಿದ್ದಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಬಿಸಿಯೂಟದ ಜೊತೆ ಜೇನುತುಪ್ಪ ನೀಡುವುದು ಕಷ್ಟ ಆದರೆ ಬಿಸಿ ಹಾಲಿನ ಜೊತೆ ಜೇನುತುಪ್ಪ ಸೇರಿಸಿ ಮಕ್ಕಳಿಗೆ ಕೊಡಬಹುದು ಆದರೆ ಪ್ರತ್ಯೇಕವಾಗಿ ನೀಡುವುದು ಇನ್ನು ಕಷ್ಟ ಎಂದು ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ.