ಬೆಂಗಳೂರು, ಸೆ 25 (MSP): ಸುಮಾರು 18 ವರ್ಷಗಳ ಬಳಿಕ ನಟ ಡಾ. ರಾಜ್ ಕುಮಾರ್ ಅವರ ಕಿಡ್ನಾಪ್ ಪ್ರಕರಣದ ತೀರ್ಪು ಇಂದು ಪ್ರಕಟಗೊಂಡಿದ್ದು, ಈರೋಡ್ ಜಿಲ್ಲಾ ನ್ಯಾಯಾಲಯ ಎಲ್ಲಾ ಒಂಬತ್ತು ಆರೋಪಿಗಳನ್ನು ಖುಲಾಸೆಗೊಳಿಸಿದೆ. ತಮಿಳುನಾಡಿನ ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಜಡ್ಜ್ ಕೆ ಮಣಿ ಅವರು ಆದೇಶ ಹೊರಡಿಸಿದ್ದಾರೆ.
ಕಿಡ್ನಾಪ್ ಆರೋಪ ಸಾಬೀತುಪಡಿಸುವಲ್ಲಿ ಹಾಗೂ ಸೂಕ್ತ ಸಾಕ್ಷ್ಯಗಳನ್ನು ಕೋರ್ಟ್ ಗೆ ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ರಾಜ್ ಕುಮಾರ್ ಕುಟುಂಬದವರು ಕೋರ್ಟ್ ವಿಚಾರಣೆ ವೇಳೆ ಸರಿಯಾಗಿ ಮಾಹಿತಿ ನೀಡದೆ ಹಾಗೂ ಹಾಜರಾಗದ ಕಾರಣ ನ್ಯಾಯಾಧೀಶ ಕೆ. ಮಣಿ ಅವರು ವೀರಪ್ಪನ್ ಸಹಚರರನ್ನು ನಿರಪರಾಧಿಗಳೆಂದು ತೀರ್ಪು ನೀಡಿದ್ದಾರೆ. ರಾಜ್ ಕುಮಾರ್ ಸಂಬಂಧಿಯಾದ ಪಾರ್ವತಮ್ಮ ಅವರ ತಮ್ಮ ಎಸ್ಎ ಗೋವಿಂದರಾಜ್, ಹಾಗೂ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಈ ಪ್ರಕರಣದ ಪ್ರಮುಖ ಸಾಕ್ಷಿಗಳಾಗಿದ್ದರು 2016 ರಲ್ಲಿ ಮದ್ರಾಸ್ ಹೈಕೋರ್ಟ್ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಪಾರ್ವತಮ್ಮ ಅವರು ಖುದ್ದು ಕೋರ್ಟಿಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಆನಾರೋಗ್ಯದ ಕಾರಣ ಕೋರ್ಟಿಗೆ ಹಾಜರಾಗಲು ಸಾಧ್ಯವಾಗಲೇ ಇಲ್ಲ. 2017ರಲ್ಲಿ ಪಾರ್ವತಮ್ಮ ನವರು ನಿಧನರಾದರು
2000ರ ಜುಲೈ 30ರಂದು ಗಾಜನೂರಿನ ಮನೆಯಿಂದ ಡಾ. ರಾಜ್ ಕುಮಾರ್ ಹಾಗೂ ಇತರೆ ಮೂವರನ್ನು ಅಪಹರಿಸಿದ್ದ ವೀರಪ್ಪನ್, 108 ದಿನಗಳ ಬಳಿಕ ಬಿಡುಗಡೆ ಮಾಡಲಾಗಿತ್ತು.2006ರ ಏಪ್ರಿಲ್ ನಲ್ಲಿ ಡಾ. ರಾಜ್ ಕುಮಾರ್ ಅವರು ಇಹಲೋಕ ತ್ಯಜಿಸಿದರು. ಪ್ರಕರಣದಲ್ಲಿ ೪೨ ಜನ ಸಾಕ್ಷಿದಾರು, ೫೨ ದಾಖಲೆ, ೩೧ ಗನ್ ಹಾಗೂ ಕೃತ್ಯಕ್ಕೆ ಬಳಸಿದ ಇತರ ಸೊತ್ತುಗಳ ಪರಿಶೀಲನೆ ಬಳಿಕವೂ ಸೂಕ್ತ ಸಾಕ್ಷಾಧಾರಗಳು ಪೊಲೀಸರರಿಗೆ ದೊರಕಿರಲಿಲ್ಲ.