ಶಿರ್ವ, ಸೆ 26 (MSP) : ಸೌದಿ ಅರೇಬಿಯಾ ಆರೋಗ್ಯ ಇಲಾಖೆಯ ಆಸ್ಪತ್ರೆಯ ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಶಿರ್ವ ಸಮೀಪದ ಕುತ್ಯಾರಿನ ಹೆಝಲ್ ಜೋತ್ಸ್ನಾ ಕ್ವಾಡ್ರಸ್ ಮೃತದೇಹ ರವಾನೆ ವಿಳಂಬವಾಗುತ್ತಾ ಬಂದಿದ್ದು ಈಗಾಗಲೇ 2 ತಿಂಗಳು ಕಳೆದು ಹೋಗಿದೆ. ಕೊನೆಗೂ ಅವರ ಮೃತದೇಹ ಸೆ.27 ರಂದು ಹುಟ್ಟೂರಿಗೆ ಬರಲಿರುವುದು ನಿಶ್ಚಲವಾಗಿದೆ. ಸೆ. 26 ರಂದೇ ಬರಬೇಕಾಗಿದ್ದ, ಮೃತದೇಹ ತಾಂತ್ರಿಕ ಕಾರಣದಿಂದ ಸೆ.27 ರಂದು ಗಲ್ಪ್ ಏರ್ ವೇಸ್ ಕಾರ್ಗೋ ಮೂಲಕ ಬೆಂಗಳೂರಿಗೆ ರವಾನೆಯಾಗಲಿದ್ದು ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ರಸ್ತೆ ಮಾರ್ಗವಾಗಿ ಶಿರ್ವಕ್ಕೆ ಶುಕ್ರವಾರ ಬೆಳಗಿನ ಜಾವ ತಲುಪುವ ಸಾಧ್ಯತೆಗಳಿವೆ. ಆದರೂ ಕೊನೆ ಕ್ಷಣದಲ್ಲಿ ಯಾವುದೇ ರೀತಿಯ ವಿಳಂಬವಾಗಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶುಕ್ರವಾರ ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.
ತನಿಖಾ ವಿಳಂಬ, ತಾಂತ್ರಿಕ ಕಾರಣ , ಅಧಿಕಾರಿಗಳ ಅಲಭ್ಯತೆ ಮತ್ತಿತ್ತರ ಕಾರಣಗಳಿಂದ ಸೌದಿ ಆಡಳಿತ 2 ತಿಂಗಳಿಗೂ ಹೆಚ್ಚು ಕಾಲ ಹೇಝಲ್ ಶವ ಬಿಟ್ಟು ಕೊಟ್ಟಿಲ್ಲ. ಇದರಿಂದ ಹೆಝಲ್ ಕುಟುಂಬ ಕಣ್ಣೀರಿಡುತ್ತಲೇ 2 ತಿಂಗಳು ಕಾಲ ಕಳೆಯುವಂತಾಗಿತ್ತು.
ಘಟನೆಯ ವಿವರ: ಸೌದಿ ಅರೇಬಿಯಾದ ಆರೋಗ್ಯ ಇಲಾಖೆಯ ಅಲ್ ಮಿಕ್ವಾ ಜನರಲ್ ಆಸ್ಪತ್ರೆಯಲ್ಲಿ ಕಳೆದ 6 ವರ್ಷಗಳಿಂದ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಹೆಝಲ್ ಜೋತ್ಸ್ನಾ ಕ್ವಾಡ್ರಸ್ (28) ವಸತಿಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು . ಜುಲೈ.19ರಂದು ಊರಲ್ಲಿರುವ ಪತಿ ಅಶ್ವಿನ್ ಮಥಾಯಸ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದರು. ಅದೇ ಕೊನೆ. ನಂತರ ಹೆಝಲ್ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅದಾಗಿ ಎರಡು ದಿನಗಳ ನಂತರ ಆತ್ಮಹತ್ಯೆ ಸುದ್ದಿ ಕುಟುಂಬಕ್ಕೆ ಬಂದು ತಲುಪಿತ್ತು.
ಹೆಝಲ್ ಸೌದಿಯ ಪ್ರಜೆಯ ದೌರ್ಜನ್ಯದಿಂದಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೂ ಮುನ್ನ ಅವರು ಕೊಂಕಣಿ ಹಾಗೂ ಇಂಗ್ಲಿಷ್ನಲ್ಲಿ ಡೆತ್ನೋಟ್ ಬರೆದಿಟ್ಟಿದ್ದರು. ಅದರಲ್ಲಿ ಸೌದಿ ಪ್ರಜೆಯ ಕಿರುಕುಳದ ಬಗ್ಗೆ ವಿವರವಾಗಿ ಪ್ರಸ್ತಾವಿಸಿದ್ದರು. ಇದರ ಆಧಾರದಲ್ಲಿಯೇ ಅಲ್ಲಿನ ಪೊಲೀಸರು ತನಿಖೆ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದರು. ನ್ಯಾಯಾಲಯದ ತೀರ್ಪಿನಂತೆ ಸೌದಿ ಕಾನೂನಿನ ಪ್ರಕಾರ ಆರೋಪಿಗೆ ಶಿಕ್ಷೆಯಾಗಲಿದೆ ಎಂದು ಮಾಹಿತಿ ಬಂದಿತ್ತು. ಆದರೂ ಹೆಝಲ್ ಮೃತದೇಹ ಒಂದಲ್ಲ ಒಂದು ಕಾರಣದಿಂದ ಊರಿಗೆ ರವಾನೆಯಾಗಲು 2 ತಿಂಗಳುಗಳ ಸಮಯವಕಾಶವೇ ಹಿಡಿದಿದೆ.