ಮೂಡುಬಿದಿರೆ,ಸೆ 26 (MSP) : ಇಲ್ಲಿನ ಗಂಟಾಲ್ಕಟ್ಟೆ ಮಸೀದಿ ಬಳಿ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಆರೋಪಿ ,ಇಮ್ತಿಯಾಜ್ ಮೇಲೆ ತಲವಾರಿನಿಂದ ಕಡಿದು ಕೊಲೆ ಯತ್ನ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರನ್ನು ಮೂಡುಬಿದಿರೆ ಪೊಲೀಸರು ಸಸಿಹಿತ್ಲು ಕದಿಕೆ ಬಳಿ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಮ್ತಿಯಾಜ್ ಮೇಲೆ ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇದು ಪೊಲೀಸರಿಗೆ ತನಿಖೆಗೆ ಮಹತ್ವದ ಸುಳಿವು ನೀಡಿತ್ತು. ಗಂಟಾಲ್ಕಟ್ಟೆ ಮಸೀದಿ ಪಕ್ಕದಲ್ಲೇ ಹೋಟೇಲ್ ನಡೆಸುತ್ತಿದ್ದ ಇಮ್ತಿಯಾಜ್ (29) ಎಂಬಾತನನ್ನು ಕಾರಿನಲ್ಲಿ ಬಂದ ತಂಡ ಸೋಮವಾರ ಬೆಳಗ್ಗೆ ಮಾರಾಕಸ್ತ್ರಗಳಿಂದ ಕಡಿದು ಕೊಲೆಗೆ ಯತ್ನಿಸಿದ್ದು, ಗಂಭೀರ ಗಾಯಗೊಂಡ ಇಮ್ತಿಯಾಜ್ ನನ್ನು ಮಂಗಳೂರಿನ ಖಾಸಗಿ ಆಸ್ಪತೆಗೆ ದಾಖಲಿಸಲಾಗಿತ್ತು.