ಗುರುಪುರ,ಸೆ 26 (MSP): ಹಿಂದೂ ಮುಖಂಡ ಹರೀಶ್ ಶೆಟ್ಟಿ (28) ಅವರನ್ನು ದುಷ್ಕರ್ಮಿಗಳು ತಲವಾರು ಬೀಸಿ ಕೊಲೆ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಶೇಷಾ ತನಿಖಾ ತಂಡ ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಹರೀಶ್ ಅವರನ್ನು ದುಷ್ಕರ್ಮಿಗಳು ಅಟ್ಟಾಡಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅವುಗಳನ್ನು ಬಜ್ಪೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸೋಮವಾರ ರಾತ್ರಿ 8 ರ ಸುಮಾರಿಗೆ ಹರೀಶ್ ಶೆಟ್ಟಿ ಅಯೆಷಾ ಮಸೀದಿ ಸಮೀಪ ಸಂಚರಿಸುತ್ತಿದ್ದಾಗ 2 ಬೈಕ್ ಗಳಲ್ಲಿ ಬಂದ ದುಷ್ಕರ್ಮಿಗಳ ತಂಡ ಹರೀಶ್ ಅವರ ಮೇಲೆ ತಲವಾರ್ ದಾಳಿ ನಡೆಸಲು ಪ್ರಾರಂಭಿಸಿತು. ದಾಳಿಯ ಸುಳಿವು ಸಿಕ್ಕ ತಕ್ಷಣ ಎಚ್ಚೆತ್ತುಕೊಂಡ ಹರೀಶ್ ದಾಳಿಯಿಂದ ಎದೆಗುಂದದೆ ದುಷ್ಕರ್ಮಿಗಳ ಮುಂದೆ ನಿಂತು ಹೋರಾಡಿ ಅವರನ್ನು ಹಿಂದಕ್ಕೆ ಅಟ್ಟುವಲ್ಲಿ ಯಶಸ್ವಿಯಾದರು.
ಹರೀಶ್ ಹಾಗೂ ದುಷ್ಕರ್ಮಿಗಳ ನಡುವೆ ಸಾಕಷ್ಟು ತಳ್ಳಾಟ ನೂಕಾಟ ನಡೆದಿದ್ದು, ಇದರ ನಡುವೆ ತಲವಾರ್ ದಾಳಿಯಿಂದ ಹರೀಶ್ ಅವರ ಕೈ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು ಇದೇ ಸಂದರ್ಭದಲ್ಲಿ ಅದೇ ದಾರಿಯಲ್ಲಿ ಮುಂದಿನಿಂದ ಒಂದು ಬಸ್ ಬಂದಿದೆ. ಇದನ್ನು ಕಂಡ ದುಷ್ಕರ್ಮಿಗಳು ಮೂಡುಬಿದಿರೆ ಕಡೆಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಘಟನೆ ನಡೆಯುತ್ತಿರುವ ಸನಿಹ ಮಸೀದಿ ಇದ್ದು ಇಲ್ಲಿ ಹಾಗೂ ಟೈರ್ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಈ ಘಟನೆ ದಾಖಲಾಗಿದೆ. ಹೀಗಾಗಿ ಪೊಲೀಸರಿಗೆ ಕೆಲವು ಮಹತ್ವದ ಸುಳಿವು ಲಭ್ಯವಾಗಿದ್ದು, ಹರೀಶ್ ಶೆಟ್ಟಿ ಅವರನ್ನು ಟಾರ್ಗೆಟ್ ಮಾಡಿಕೊಂಡ ಗುಂಪು ಕೊಲೆ ಮಾಡುವ ಉದ್ದೇಶದಿಂದ ಆಗಮಿಸಿರಬಹುದೆನ್ನುವ ಶಂಕೆ ವ್ಯಕ್ತವಾಗಿದೆ.