ಬೆಂಗಳೂರು,ಸೆ 26 (MSP): ನಗರದ ಯಲಹಂಕದ ಅಲ್ಲಾಳ ಸಂದ್ರ ಬಳಿ ಯೂತ್ ಕಾಂಗ್ರೆಸ್ ಅಧ್ಯಕ್ಷನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಗಳಿಬ್ಬರ ಮೇಲೆ ಪೊಲೀಸರು ಫೈರಿಂಗ್ ನಡೆದ ಘಟನೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ದೊಡ್ಡಜಾಲ ಬಳಿ ಬುಧವಾರ ಬೆಳಗ್ಗೆ ನಡೆದಿದೆ. ಸೆ.23 ರ ಭಾನುವಾರ ರಾತ್ರಿ ಸಿನಿಮಾ ನೋಡಿ ವಾಪಸ್ ಬರುತ್ತಿರುವಾಗ ಐದು ಜನ ದುಷ್ಕರ್ಮಿಗಳು ಯೂತ್ ಕಾಂಗ್ರೆಸ್ ಅಧ್ಯಕ್ಷ ಅರುಣ್ ರನ್ನು ಅಡ್ಡ ಹಾಕಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ದುಷ್ಕರ್ಮಿಗಳ ದಾಳಿಗೆ ತೀವ್ರ ರಕ್ತಸ್ರಾವದಿಂದ ಅರುಣ್ ಸ್ಥಳದಲ್ಲೆ ಮೃತಪಟ್ಟಿದ್ದರು.
ಹತ್ಯೆಯಾದ ಅರುಣ್
ಬಳಿಕ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಆರೋಪಿಗಳಾದ ಮನೋಜ್ ಅಲಿಯಾಸ್ ಕೆಂಚ ಮತ್ತು ಮಂಜೇಗೌಡನ ದೊಡ್ಡಜಾಲದ ಸಮೀಪ ತಲೆಮರೆಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು ವಿದ್ಯಾರಣ್ಯಪುರ ಮತ್ತು ಯಲಹಂಕ ಪೊಲೀಸರು ಕಾರ್ಯಾಚರಣೆಗಿಳಿದ್ದರು. ಆದರೆ ಈ ವೇಳೆ ಪೊಲೀಸರ ಮೇಲೆ ದುಷ್ಕರ್ಮಿಗಳು ಮಾರಾಕಾಯುಧಗಳಿಂದ ದಾಳಿಗೆ ಮುಂದಾಗಿದ್ದಾರೆ. ಆರೋಪಿ ಮನೋಜ್ ಅಲಿಯಾಸ್ ಕೆಂಚ ಪೊಲೀಸ್ ಸಿಬ್ಬಂದಿಗಳಾದ ಮಹದೇವಮೂರ್ತಿ ಹಾಗೂ ಉದಯ್ ಅವರಿಗೆ ಡ್ರಾಗರ್ನಿಂದ ಇರಿದ್ದಾನೆ . ಈ ಸಂದರ್ಭ ಆತ್ಮರಕ್ಷಣೆಗಾಗಿ ಪೊಲೀಸರು ಇಬ್ಬರ ಮೇಲೆ ಗುಂಡು ಹಾರಿಸಿದ್ದಾರೆ. ಇಬ್ಬರ ಕಾಲಿಗೆ ಗುಂಡು ತಗುಲಿ ಸ್ಥಳದಲ್ಲಿ ಕುಸಿದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಅರುಣ್ ಕುಮಾರ್ ಸಂಬಂಧಿ ಅಭಿಷೇಕ್ ನೀಡಿದ ಮಾಹಿತಿ ಆಧರಿಸಿ ವಿಶೇಷ ತಂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಅರುಣ್, ಕಾಂಗ್ರೆಸ್ನ ಸಕ್ರಿಯ ಕಾರ್ಯಕರ್ತನಾಗಿದ್ದು ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಫೈನಾನ್ಸ್ ವ್ಯವಹಾರಕ್ಕೆ ಸಂಬಂಧಿಸಿ ಅರುಣ್ನನ್ನು ಮನೋಜ್ ಮತ್ತು ಮಂಜೇಗೌಡ ಕೊಲೆಗೈದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.