ನವದೆಹಲಿ,ಸೆ 26 (MSP): ಬಹು ನಿರೀಕ್ಷಿತ ಆಧಾರ್ ಸಿಂಧುತ್ವ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಹೊರಹಾಕಿದ್ದು, ಆಧಾರ್ ಸಿಂಧುತ್ವವನ್ನು ಸುಪ್ರೀಂ ಎತ್ತಿ ಹಿಡಿದಿದೆ. ಈ ಮೂಲಕ ಸರ್ಕಾರಿ ಸೌಲಭ್ಯಗಳ ಪಡೆಯಲು ಆಧಾರ್ ಬೇಕೋ ಅಥವಾ ಬೇಡವೋ ಎಂಬ ಗೊಂದಲಗಳಿಗೆ ಸುಪ್ರೀಂಕೋರ್ಟ್ ಕೊನೆಗೂ ತೆರೆ ಎಳೆದಿದೆ. ಐವರು ಸದಸ್ಯರ ಸಾಂವಿಧಾನಿಕ ಪೀಠ ಇಂದು ಮಹತ್ವದ ತೀರ್ಪು ನೀಡಿದ್ದು, ಆಧಾರ್ ಕಾರ್ಡ್ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ 29 ಅರ್ಜಿಗಳು ಕೋರ್ಟ್ಗೆ ಸಲ್ಲಿಕೆಯಾಗಿತ್ತು. ಜನವರಿ 17ರಂದು ಈ ಅರ್ಜಿಗಳ ಅಂತಿಮ ವಿಚಾರಣೆ ಕೈಗೆತ್ತಿಕೊಂಡ ನ್ಯಾಯ ಪೀಠವು ನಾಲ್ಕು ತಿಂಗಳ ಅವಧಿಯಲ್ಲಿ 38 ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿತು. ಮೇ 10ರಂದು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ ಕೆ ಸಿಕ್ರಿ, ಎ.ಎಂ.ಖಾನಿವಿಲ್ಕರ್, ಡಿವೈ ಚಂದ್ರಚೂಡ್, ಅಶೋಕ್ಭೂಷಣ್ ಒಳಗೊಂಡ ಪಂಚ ಪೀಠ ವಿಚಾರಣೆ ಮುಕ್ತಾಯಗೊಳಿಸಿದ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗಾ ತ್ರ್ಪು ಪ್ರಕಟಿಸಿದ್ದು ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದಿದೆ.
ಸರ್ಕಾರಿ ಯೋಜನೆಗಳಿಗೆ ಮಾತ್ರ ಆಧಾರ್ ಜೋಡಣೆ ಮಾಡುವಂತೆ ಸುಪ್ರೀಂಕೋರ್ಟ್ ತನ್ನ ಅಂತಿಮ ತೀರ್ಪಿನಲ್ಲಿ ಘೋಷಣೆ ಮಾಡಿದ್ದು, ಖಾಸಗಿ ಬ್ಯಾಂಕ್ಗಳು , ಖಾಸಗಿ ಶಿಕ್ಷಣ ಸಂಸ್ಥೆಗಳು ಆಧಾರ್ ಕಾರ್ಡ್ ಜೋಡಿಸುವಂತಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಪ್ಯಾನ್, ಆದಾಯ ತೆರಿಗೆ, ಆಸ್ತಿ ಖರೀದಿಗೆ, ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರಗಳಿಗೆ ಆಧಾರ್ ಸಲ್ಲಿಸುವುದು ಕಡ್ಡಾಯವಾಗಿದ್ದು, ಯಾವುದೇ ಖಾಸಗಿ ಸಂಸ್ಥೆಗಳು ಆಧಾರ್ ಕೇಳುವಂತಿಲ್ಲ ಎಂದು ಸುಪ್ರಿಂ ಸ್ಪಷ್ಟಪಡಿಸಿದೆ. ಶಾಲೆಗಳ ಪ್ರವೇಶಾತಿ ವೇಳೆ, ಬಿಎಸ್ಸಿ, ಯುಜಿಸಿ, ನೀಟ್ ಪರೀಕ್ಷೆಗಳಿಗೆ .ಸಿಮ್ ಖರೀದಿ, ಪೇಟಿಎಂ, ಫೋನ್ ಪೇ ಸೇರಿದಂತೆ ಡಿಜಿಟಲ್ ಪೇಮೆಂಟ್ ಆ್ಯಪ್ ಗಳಿಗೆ ಆಧಾರ್ ಕೇಳುವಂತಿಲ್ಲ ಹಾಗೂ ಸೆಕ್ಷನ್ 2(ಬಿ) ಅಕ್ರಮ ವಲಸಿಗರಿಗೆ ಆಧಾರ್ ಕೊಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.