ಮಂಗಳೂರು, ಸೆ 26 (MSP): ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನ ಕಟ್ಟಡದ ಬಾಕಿ ಉಳಿದಿರುವ ಕಾಮಗಾರಿ ಹಾಗೂ ಯೋಜನೆಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಸರಕಾರದಿಂದ ಆಗಬೇಕಾದ ಕೆಲಸಗಳನ್ನು ಚುರುಕು ಮುಟ್ಟಿಸುವುದಾಗಿ ರಾಜ್ಯ ವಸತಿ ಮತ್ತು ನಗರಾಭಿವೃದ್ಧಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಹೇಳಿದ್ದಾರೆ.
ಅವರು ಸೆ, 26 ರ ಬುಧವಾರ ಉರ್ವಾಸ್ಟೋರ್ ಬಳಿ ಇರುವ ತುಳು ಭವನಕ್ಕೆ ಭೇಟಿ ನೀಡಿ ತುಳು ಭವನದಲ್ಲಿ ಇದುವರೆಗೆ ನಡೆದಿರುವ ಕಾಮಗಾರಿಯನ್ನು ಪರಿಶೀಲನೆ ನಡೆಸಿ , ಬಾಕಿ ಉಳಿದಿರುವ ಕಾಮಗಾರಿಯ ಬಗ್ಗೆ ಅಕಾಡೆಮಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ತುಳು ಭವನದಲ್ಲಿ ಪೂರ್ಣಗೊಳ್ಳಬೇಕಾಗಿರುವ ದೊಡ್ಡ ಸಭಾಂಗಣ , ಆರ್ಟ್ ಗ್ಯಾಲರಿ , ಮ್ಯೂಸಿಯಮ್ , ಲಿಫ್ಟ್ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆ ನೀಡಿರುವ ಅಂದಾಜು ಪಟ್ಟಿಯಂತೆ ಅವಶ್ಯ ಇರುವ 3.6 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲು ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಸಚಿವ ಯು.ಟಿ.ಖಾದರ್ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಪದವಿ ಪೂರ್ವ ಶಿಕ್ಷಣದಲ್ಲಿ ತುಳು ಪಠ್ಯವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಅಕಾಡೆಮಿ ಸಲ್ಲಿಸಿರುವ ಬೇಡಿಕೆಗೆ ಸ್ಪಂದಿಸುವುದಾಗಿ ತಿಳಿಸಿದ ಸಚಿವರು , ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರೊಂದಿಗೆ ಹಾಗೂ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಹೇಳಿದರು. ಅಕಾಡೆಮಿ ಅಧ್ಯಕ್ಷ ಶ್ರೀ. ಎ.ಸಿ. ಭಂಡಾರಿ , ಸದಸ್ಯರಾದ ತಾರಾನಾಥ್ ಗಟ್ಟಿ ಕಾಪಿಕಾಡ್ , ಬೆನೆಟ್ ಅಮ್ಮನ್ನ , ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಉಪಸ್ಥಿತರಿದ್ದರು.