ಮಂಗಳೂರು, ಸೆ 26(SM): ಕೆಲ ಮಾಧ್ಯಮಗಳಲ್ಲಿ ಕಟೀಲು ಯಕ್ಷಗಾನ ಮೇಳಗಳ ಬಗ್ಗೆ ಅಪಪ್ರಚಾರದ ಮಾಹಿತಿಗಳು ಬಂದಿವೆ. ಕಾನೂನು ಚೌಕಟ್ಟನ್ನು ಮೀರಿ ಯಾವುದೇ ಕಾರ್ಯವೆಸಗಿಲ್ಲ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆನುವಂಶಿಕ ಮೊಕ್ತೇಸರ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ ಹೇಳಿದ್ದಾರೆ. ಅವರು ಸೆಪ್ಟೆಂಬರ್ 26ರ ಬುಧವಾರದಂದು ಕಟೀಲು ದೇಗುಲದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ದೇಗುಲದಲ್ಲಿರುವ ದಾಖಲೆಗಳ ಆಧಾರದಲ್ಲಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಯಕ್ಷಗಾನ ಮೇಳಗಳ ಬಗ್ಗೆ ವರದಿಯನ್ನು ಕಳುಹಿಸಲಾಗಿದೆ. ಕಟೀಲು ಮೇಳಗಳಿಂದ ಕಳೆದ ತಿರುಗಾಟದಲ್ಲಿ 1 ಕೋಟಿ 4 ಲಕ್ಷ ರೂ. ಬಂದಿದೆ. ಮೇಳದ ವೀಳ್ಯ ಹಾಗೂ ಇತರ ಖರ್ಚುಗಳನ್ನು ದೇಗುಲದ ಆಡಳಿತ ಮಂಡಳಿಯೇ ನಿರ್ಧರಿಸುತ್ತದೆಯೇ ಹೊರತು ಮೇಳದ ಸಂಚಾಲಕರು ಅಥವಾ ಯಕ್ಷಧರ್ಮಬೋಧಿನೀ ಟ್ರಸ್ಟ್ ನಿರ್ಧರಿಸುವುದಲ್ಲ ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಮೇಳಗಳು ಹಾಗೂ ಟ್ರಸ್ಟ್ ಬಗ್ಗೆ ಬಂದಿರುವ ದೂರುಗಳ ಹಿನ್ನಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಂದ ಮೇಳಗಳನ್ನು ಏಲಂ ಯಾಕೆ ನಡೆಸಬಾರದು. ಟ್ರಸ್ಟ್ನ ಆಸ್ತಿಗಳನ್ನು ಯಾಕೆ ಮುಟ್ಟುಗೋಲು ಹಾಕಬಾರದು ಎಂದು ವಿವರಣೆ ಕೇಳಿ 192 ಪುಟಗಳ ವರದಿ ಬಂದಿದ್ದು, ಇದಕ್ಕೆ ದೇವಸ್ಥಾನಗಳ ದಾಖಲೆಗಳ ಪ್ರಕಾರ ಉತ್ತರವನ್ನು ನೀಡಿದ್ದೇವೆ. ಅಲ್ಲಿಂದ ವಿವರಣೆ ಕೇಳಿ ಜಿಲ್ಲಾಧಿಕಾರಿಗಳಿಗೆ ಈ ವರದಿ ಬಂದಿದ್ದು, ಜಿಲ್ಲಾ ಆಯುಕ್ತರಿಗೆ ಬಂದಿದೆ. ಅವರು ತನಿಖೆ ನಡೆಸಿ ವರದಿಯನ್ನು ನೀಡಬೇಕಾಗಿದೆ. ದೇಗುಲಕ್ಕೆ ಪರಿಶೀಲನೆಗೆ ಬಂದ ಅಧಿಕಾರಿಗಳಾಗಲಿ, ಆಯುಕ್ತರಾಗಲಿ ಮೇಳಗಳ ವ್ಯವಸ್ಥೆಯಲ್ಲಿ ಯಾವುದೇ ಅವ್ಯವಹಾರ ನಡೆದಿರುವುದು ಕಂಡುಬಂದಿಲ್ಲ. ಸೂಕ್ತ ಬದಲಾವಣೆಗಳನ್ನು ಮಾಡಬಹುದು ಎಂದು ವರದಿ ನೀಡಿದ್ದಾರೆ. ಹಾಗಾಗಿ ಮಾಧ್ಯಮಗಳಲ್ಲಿ ಬರುತ್ತಿರುವ ಮೇಳಗಳ ಏಲಂಗೆ ಕ್ಷಣಗಣನೆ, ಮುಟ್ಟುಗೋಲು ಎಂಬಂತಹ ಸುದ್ದಿಗಳು ಸುಳ್ಳಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಅವ್ಯವಹಾರ ನಡೆದಿಲ್ಲ:
ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಧರ್ಮ ಬೋಧಿಸಿ ಚಾರಿಟೇಬಲ್ ಟ್ರಸ್ಟ್, ಕಲಾವಿದರ ಮತ್ತು ಸೇವಾದಾರರ ಹಿತದೃಷ್ಟಿಯಿಂದ ಸ್ಥಾಪಿಸಲಾಗಿದ್ದು, ಧಾರ್ಮಿಕ ದತ್ತಿ ಇಲಾಖಾಯುಕ್ತರೇ 2006ರಲ್ಲಿ ಧರ್ಮಾರ್ಥ ಸಂಸ್ಥೆ ಎಂದು ಪ್ರಮಾಣ ಪತ್ರ ನೀಡಿದ್ದಾರೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆಸಿಲ್ಲ. ಟ್ರಸ್ಟ್ನ ಲೆಕ್ಕಪತ್ರಗಳು ಪಾರದರ್ಶಕವಾಗಿದ್ದು, ಯಾವುದೇ ತನಿಖೆಗೂ ಸಿದ್ಧರಿದ್ದೇವೆ ಎಂದು ಟ್ರಸ್ಟ್ನ ಸದಸ್ಯರಲ್ಲೊಬ್ಬರಾದ ಮೇಳದ ಕಲಾವಿದರೂ ಆಗಿರುವ ಸುಣ್ಣಂಬಳ ವಿಶ್ವೇಶ್ವರ ಭಟ್ ತಿಳಿಸಿದ್ದಾರೆ.
ಟ್ರಸ್ಟ್ನ ಅಧ್ಯಕ್ಷ ರಾಘವೇಂದ್ರ ಆಚಾರ್ಯರು ವೈಯುಕ್ತಿಯವಾಗಿ ವರ್ಷಂಪ್ರತಿ ಎರಡು ಲಕ್ಷ ರೂ. ಗೌರವ ಧನಕ್ಕಾಗಿ ನೀಡಿದ್ದಲ್ಲದೆ, ಟ್ರಸ್ಟ್ನ ಸದಸ್ಯರೇ ಆರಂಭದಲ್ಲಿ 25 ಲಕ್ಷ ರೂ. ಹಾಗೂ ಕಳೆದ ವರ್ಷ ಹತ್ತು ಲಕ್ಷ ನೀಡಿದ್ದಾರೆ. ಹೊರತು ಯಾರಿಂದಲೂ ದೇಣಿಗೆ ಪಡೆದಿಲ್ಲ ಎಂಬುವುದಾಗಿ ಟ್ರಸ್ಟ್ ಸ್ಪಷ್ಟನೆ ನೀಡಿದೆ.
ಡಿಸೆಂಬರ್ 2ಕ್ಕೆ ಮೇಳದ ತಿರುಗಾಟ:
ಡಿಸೆಂಬರ್ 2ಕ್ಕೆ ಕಟೀಲು ಮೇಳಗಳ ಈ ವರುಷದ ತಿರುಗಾಟ ಆರಂಭವಾಗಲಿದ್ದು, ಮೇಳದ ಸಂಚಾಲಕರು ಕಲ್ಲಾಡಿ ದೇವೀಪ್ರಸಾದ ಶೆಟ್ರು ಆಗಿದ್ದಾರೆ. ಟ್ರಸ್ಟ್ ಈ ಹಿಂದಿನಂತೆಯೇ ಕಾರ್ಯವೆಸಗಲಿದೆ ಎಂದು ಮೊಕ್ತೇಸರ ವಾಸುದೇವ ಆಸ್ರಣ್ಣ ಹೇಳಿದರು.