ಮಂಗಳೂರು, ಸೆ 26(SM): ವೃದ್ಧರೋರ್ವರ ಅಶ್ಲೀಲ ವೀಡಿಯೋ ಸೆರೆ ಹಿಡಿದು, ಬಳಿಕ ದಂಪತಿಯನ್ನು ಅಪಹರಿಸಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಆರೋಪಿಗಳನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ತಾಲೂಕು ಅಧ್ಯಕ್ಷೆಯಾದ ಶ್ರೀಲತಾ ಮತ್ತು ಆರೋಪಿ ರಾಕೇಶ್ ಎಂಬವರನ್ನು ದಸ್ತಗಿರಿ ಮಾಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸೆಪ್ಟೆಂಬರ್ ೨೩ರಂದು ವೃದ್ದದಂಪತಿಗೆ ಆರೋಪಿ ಮಹಿಳೆ ದೂರವಾಣಿ ಕರೆ ಮಾಡಿ ಮಂಗಳೂರು ನಗರದ ಲೇಡಿಹಿಲ್ ಸ್ಟೇಡಿಯಂ ಬಳಿಗೆ ಬರುವಂತೆ ತಿಳಿಸಿದ್ದರು. ವೃದ್ದ ದಂಪತಿ ಕಾರಿನಲ್ಲಿ ಸ್ಟೇಡಿಯಂ ಬಳಿಗೆ ಬಂದಾಗ ಅವರನ್ನು ಮಹಿಳೆ ಮತ್ತು 4 ಮಂದಿ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಅಪಹರಿಸಿ ಸುರತ್ಕಲ್ ನ ರಾಜೇಶ್ ಪವಿತ್ರನ್ ಎಂಬವರ ಮನೆಯಲ್ಲಿ ಕೂಡಿ ಹಾಕಿದ್ದಾರೆ.
ಅಲ್ಲದೆ ತಲಾ 5 ಲಕ್ಷ ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ದು, ಇಲ್ಲದಿದ್ದಲ್ಲಿ ಮೆಮೋರಿ ಕಾರ್ಡ್ ನಲ್ಲಿರುವ ಅಶ್ಲೀಲ ಚಿತ್ರಗಳನ್ನು ಮಾದ್ಯಮಗಳಿಗೆ ಬಿಡುಗಡೆ ಮಾಡುತ್ತೇವೆ ಎಂದು ಬೆದರಿಸಿದ್ದಾರೆ. ಈ ದಂಪತಿ ಬೇಡಿಕೆ ಇಟ್ಟ ಹಣ ನೀಡದಿದ್ದಾಗ ಆತನಿಗೆ ಎಲ್ಲರೂ ಸೇರಿ ಹಲ್ಲೆ ನಡೆಸಿ ಬಲಾತ್ಕಾರವಾಗಿ ಕುತ್ತಿಗೆಯಲ್ಲಿದ್ದ 4 ½ ಪವನ್ ತೂಕದ ಚೈನ್, ಚಿನ್ನದ ಉಂಗರ ಹಾಗೂ ನಗದು ದರೋಡೆಗೈದಿದ್ದಾರೆ.
ದರೋಡೆಗೆ ಒಳಗಾದ ವ್ಯಕ್ತಿ ಬರ್ಕೆ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಜಾಡು ಹಿಡಿದು ವಿಚಾರಣೆ ತನಿಖೆ ಆರಂಭಿಸಿದ ಪೊಲೀಸರಿಗೆ ಆರೋಪಿಗಳ ಸುಳಿವು ಲಭಿಸಿದ್ದು, ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ತಾಲೂಕು ಅಧ್ಯಕ್ಷೆ ಶ್ರೀಲತಾ ಮತ್ತು ರಾಕೇಶ್ ಎಂಬವರನ್ನು ದಸ್ತಗಿರಿ ಮಾಡಿದ್ದಾರೆ. ಬಳಿಕ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾರೆ.