ಕೊಟ್ಟಾಯಂ, ಸೆ 27 (MSP): ಕೇರಳ ರಾಜ್ಯ ರಾಜಕೀಯದಲ್ಲಿ ಬದಲಾವಣೆಗಳಾಗುವ ಲಕ್ಷಣಗಳು ಗೋಚರವಾಗತೊಡಗಿದೆ. ಕೇರಳ ಎರಡು ಪ್ರಮುಖ ಸಿರಿಯನ್ ಚರ್ಚ್ ನ ಪಾದ್ರಿಗಳು ಹಾಗೂ ಅಧಿಕಾರಿಗಳು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದು 2019 ರಲ್ಲಿ ಲೋಕಸಭೆಯ ಚುನಾವಣೆಯಲ್ಲಿ ಈ ಭಾಗದಲ್ಲಿ ಮಹತ್ವದ ಪ್ರಭಾವ ಉಂಟು ಮಾಡಲಿದೆ ಎಂದು ನಂಬಲಾಗಿದೆ
ಪಾಲ ಚರ್ಚ್ ನ ಫಾದರ್ ಗೀವರ್ಗೀಸ್ ಥಾಮಸ್ ಕಿಳಕ್ಕೇಡಂ ಮತ್ತು ಆಂಡ್ರ್ಯೂಸ್ ಮಂಗಲತ್ ಹಾಗೂ ಥಾಮಸ್ ಕುಲತುಮ್ ಕಲ್ ಬಿಜೆಪಿ ಸೇರಿದ್ದಾರೆ. ತಾವು ಮಾತ್ರವಲ್ಲದೆ ತಮ್ಮ ಸಮುದಾಯದ ಇನ್ನಷ್ಟು ಜನರು ಬಿಜೆಪಿ ಸೇರಲಿದ್ದಾರೆ ಎಂದು ಕಿಳಕ್ಕೇಡಂ ತಿಳಿಸಿದ್ದಾರೆ. ಇವರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಕೇರಳ ರಾಜ್ಯ ಅಧ್ಯಕ್ಷ ಪಿ.ಎಸ್ ಶ್ರೀಧರನ್ ಪಿಳ್ಳೈ ಹಾಜರಿದ್ದರು.
ಬಿಜೆಪಿ ಸೇರ್ಪಡೆಯ ಬಳಿಕ ಮಾತನಾಡಿದ ಕಿಳಕ್ಕೇಡಂ, ಭಾರತೀಯ ಜನತಾ ಪಕ್ಷ ಕೋಮುವಾದಿ ಪಕ್ಷವಲ್ಲ. ಈ ರೀತಿಯಾಗಿ ಕೇವಲ ಕಾಂಗ್ರೆಸ್ ಪಕ್ಷ ಆರೋಪಿಸುತ್ತಿದೆಯಷ್ಟೇ. ಬಿಜೆಪಿಯೂ ಸಮಾಜದ ಎಲ್ಲಾ ಜನರನ್ನು ಪ್ರತಿನಿಧಿಸುವ ಪಕ್ಷ ಎಂದು ನನಗೆ ಇದೀಗ ಮನವರಿಕೆಯಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬಡವರ ಪರ ಶ್ರಮಿಸುತ್ತಿದೆ. ಸಮಾಜದ ಪ್ರತಿ ವ್ಯಕ್ತಿಯ ಅಗತ್ಯಗಳನ್ನು ಇದು ಪೂರೈಸುವ ಪ್ರಯತ್ನ ನಡೆಸುತ್ತಿದೆ ಎಂದು ಕಿಳಕ್ಕೇಡಂ ತಿಳಿಸಿದ್ದಾರೆ.