ಮಂಗಳೂರು, ಸೆ 27 (MSP): ಕರಾವಳಿಯಲ್ಲಿ ತಿಂಗಳಿನ ಹಿಂದೆಯಷ್ಟೇ ತನ್ನ ಆರ್ಭಟ ತೋರಿಸಿ ನದಿ ತೊರೆಗಳು ತುಂಬಿ ಹರಿದು ಅತಿವೃಷ್ಟಿಗೆ ಕಾರಣವಾಗಿದ್ದ ಮಳೆರಾಯ ಇದ್ದಕ್ಕಿದ್ದಂತೆ ತಣ್ಣಾಗಾಗಿದ್ದ. ಸೆಪ್ಟೆಂಬರ್ ತಿಂಗಳ ಮೊದಲ ವಾರದಿಂದಲೇ ಕರಾವಳಿಯಲ್ಲಿ ಮಳೆ ಇಲ್ಲದೆ, ಬಿಸಿಲಿಗೆ ತುಂಬಿ ಹರಿದ ನದಿ ತೊರೆಗಳು ಬತ್ತಿಹೋಗಿತ್ತು. ಜತೆಗೆ ಸುಡುಬಿಸಿಲು ಆವರಿಸಿ ಬಿರು ಬೇಸಿಗೆ ವಾತಾವರಣ ಜಿಲ್ಲೆಯಲ್ಲಿ ಸೃಷ್ಟಿಯಾಗಿತ್ತು.
ಆದರೆ ಕಾಣೆಯಾಗಿದ್ದ ಮಳೆರಾಯ ಗುಡುಗು ಸಿಡಿಲಿನೊಂದಿಗೆ ಮತ್ತೆ ಕಾಲಿಟ್ಟಿದ್ದು, ತಿಂಗಳ ಬಳಿಕ ಮತ್ತೆ ಮಳೆ ಆರಂಭವಾಗಿದೆ. ಸೆ.27 ರ ಗುರುವಾರ ಮುಂಜಾವಿನಿಂದಲೇ ನಗರದಲ್ಲಿ ಭಾರೀ ಸಿಡಿಲು ಗುಡುಗಿನೊಂದಿಗೆ ತುಂತುರು ಮಳೆಯಾಗುತ್ತಿದೆ. ಹವಾಮಾನ ಇಲಾಖೆಯೂ ಜಿಲ್ಲೆಯಲ್ಲಿ ಮತ್ತೆರಡು ದಿನ ಮಳೆ ಮುಂದುವರಿಯಲಿದೆ ಎಂದು ತಿಳಿಸಿದೆ.
ಈ ನಡುವೆ ಹವಾಮಾನ ಇಲಾಖೆಯಿಂದ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಸೆಪ್ಟೆಂಬರ್ 27 ರಿಂದ 30ರ ನಡುವೆ ಭಾರೀ ಮಳೆಯಾಗಲಿದ್ದು, ಪರಿಣಾಮ ಅರಬ್ಬಿ ಸಮುದ್ರದಲ್ಲಿ ಅಲೆಗಳ ಆರ್ಭಟ ಜೋರಾಗಲಿದ್ದು ಒಂದೂವರೆ ಮೀಟರ್ ಎತ್ತರಕ್ಕೆ ಸಮುದ್ರದ ಅಲೆಗಳು ಅಪ್ಪಳಿಸುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.