ಮಂಗಳೂರು, ಸೆ 27 (MSP): 2019 ಲೋಕಸಭಾ ಚುನಾವಣೆಗೆ ಇನ್ನೇನು ಕೆಲ ತಿಂಗಳಷ್ಟೇ ಬಾಕಿ ಉಳಿದಿದ್ದು ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ರಣತಂತ್ರವನ್ನು ಹಣಿಯಲು ಬಿಜೆಪಿ ಈಗಾಗಲೇ ತಯಾರಿ ನಡೆಸಿದೆ. ಈ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ಘಟಕವೂ ಭರ್ಜರಿ ಸಿದ್ದತೆ ನಡೆಸಿದ್ದು, ಈಗಾಗಲೇ 28 ಕ್ಷೇತ್ರಗಳ ಪೈಕಿ, 24 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರು ಮಾಡಿದೆ ಎನ್ನುವ ಮಾಹಿತಿ ಪಕ್ಷದ ಮೂಲಗಳಿಂದ ದೊರಕಿದೆ. ಆದರೆ, ಇನ್ನೂ 4 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಈ ಪಟ್ಟಿಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಗೆ ನಳಿನ್ ಕುಮಾರ್ ಕಟೀಲ್ ಅಭ್ಯರ್ಥಿಯಾಗಿ ಫೈನಲ್ ಆಗಿದ್ಧಾರೆ. ಇನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರ ಬದಲಾಗಿ, ಈ ಬಾರಿಯ ರೇಸ್ನಲ್ಲಿ ಮೂವರ ಹೆಸರು ಕೇಳಿ ಬಂದಿದೆ, ಇತ್ತೀಚೆಗೆ ಬಿಜೆಪಿ ಸೇರಿದ್ದ ಜಯಪ್ರಕಾಶ್ ಹೆಗ್ಡೆ, ಮಾಜಿ ಸಿಎಂ ಸದಾನಂದ ಗೌಡ ಹಾಗು ಡಿ.ಎನ್ ಜೀವರಾಜ್ ಅವರ ಹೆಸರುಗಳು ಪಟ್ಟಿಯಲ್ಲಿದೆ. ಇವೆಲ್ಲವೂ ಬಿಜೆಪಿಯ ಅಂತಿಮವಾದ ಅಧಿಕೃತ ಪಟ್ಟಿ ಹೊರಬಿದ್ದ ತಕ್ಷಣ ಸ್ಪಷ್ಟವಾಗಲಿದೆ.
2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸುವಲ್ಲಿ ವಿಫಲವಾಗಿತ್ತು. ಇನ್ನೂ ಲೋಕಸಭೆ ಚುನಾವಣೆಯಲ್ಲಿಯೂ ಅತೀ ಹೆಚ್ಚು ಸ್ಥಾನಗಳನ್ನು ಪಡೆಯಬೇಕು ಎಂಬುವುದು ಭಾರತೀಯ ಜನತಾ ಪಕ್ಷದ ಗುರಿಯಾಗಿದ್ದು, ಇದಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದೆ. ಇನ್ನು ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಶಿವಮೊಗ್ಗ, ಶ್ರೀರಾಮುಲು ರಾಜೀನಾಮೆಯಿಂದ ತೆರವಾದ ಬಳ್ಳಾರಿ ಕ್ಷೇತ್ರಕ್ಕೂ ಅಭ್ಯರ್ಥಿ ಅಂತಿಮಗೊಳಿಸಲಾಗಿದ್ದು .ಅಕ್ಟೋಬರ್ 2 ರ ಗಾಂಧಿ ಜಯಂತಿ ಬಳಿಕ ರಾಜ್ಯದ 30 ಜಿಲ್ಲೆಗಳಲ್ಲೂ ಪ್ರವಾಸ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.