ವಿಟ್ಲ, ಸೆ 27(SM): ಫೇಸ್ಬುಕ್ನಲ್ಲಿ ಕಮೆಂಟ್ ಹಾಕಿದ ವಿಚಾರದಲ್ಲಿ ವಿಚಾರಿಸಲು ಬಂದಾಗ ನಡೆದ ಘರ್ಷಣೆ ವೇಳೆ ತಡೆಯಲು ಬಂದ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಸದಸ್ಯನ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಬೈರಿಕಟ್ಟೆ ಮೈದಾನದಲ್ಲಿ ನಡೆದಿದೆ.
ಅಳಿಕೆ ಗ್ರಾಮ ಪಂಚಾಯಿತಿ ಸದಸ್ಯ, ಅಳಿಕೆ ಗ್ರಾಮದ ಕುಡಿಯರಮೂಲೆ ನಿವಾಸಿ ರವೀಶ(38) ಹಲ್ಲೆಗೊಳಗಾಗಿದ್ದು, ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಫೇಸ್ಬುಕ್ನಲ್ಲಿ ವಿಚಾರಯೊಂದಕ್ಕೆ ಸಂಬಂಧಿಸಿ ಇಮ್ರಾನ್ ಎಂಬವರು ಕಮೆಂಟ್ ಮಾಡಿದ್ದರು ಎನ್ನಲಾಗಿದೆ.
ಸೆಪ್ಟೆಂಬರ್ 27ರ ಗುರುವಾರ ಸಂಜೆ ಬೈರಿಕಟ್ಟೆ ಸಮೀಪದ ಮೈದಾನದಲ್ಲಿ ವಾಲಿಬಾಲ್ ಆಟವಾಡುತ್ತಿದ್ದ ವೇಳೆ ನಾಲ್ಕು ದ್ವಿಚಕ್ರ ವಾಹನದಲ್ಲಿ ಆಗಮಿಸಿ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಎಂಟು ಮಂದಿಯ ತಂಡ ಕಮೆಂಟ್ ಹಾಕಿದ ವಿಚಾರದಲ್ಲಿ ಇಮ್ರಾನ್ನಲ್ಲಿ ವಿಚಾರಿಸಿದ್ದಾರೆ. ಈ ವೇಳೆ ಸಂದೀಪ್ ಎಂಬವರು ಮಧ್ಯೆ ಪ್ರವೇಶಿಸಿ ಸಮಾಧಾನಪಡಿಸಲು ಮುಂದಾಗಿದ್ದಾರೆ. ಈ ಸಂದರ್ಭ ಇಮ್ರಾನ್ ಹಾಗೂ ಸಂದೀಪ್ ಅವರ ಮೇಲೆ ತಂಡ ಹಲ್ಲೆಗೆ ಯತ್ನಿಸಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ರವೀಶ್ ಅವರು ತಡೆಯಲು ಮುಂದಾಗುತ್ತಿದ್ದಂತೆ ತಂಡ ದೊಣ್ಣೆದಿಂದ ಗಂಭೀರ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ.
ಬಳಿಕ ಸ್ಥಳೀಯರು ಜಮಾಯಿಸುತ್ತಿದ್ದಂತೆ ತಂಡ ಅಳಿಕೆ ಕಡೆಗೆ ಪರಾರಿಯಾಗಿದೆ. ಈ ಬಗ್ಗೆ ರವೀಶ್ ಅವರು ಚಂದ್ರ ಕನ್ಯಾನ, ಮಂಜುನಾಥ ಅಂಗ್ರಿ, ಕಿರಣ್ ಕೇಪು, ಇತರರ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಲ್ಲೆ ಮಾಡಲು ಬಂದವರು ಹಿಂದೂ ಸಂಘಟನೆಯ ಕಾರ್ಯಕರ್ತರು ಎಂದು ಗಾಯಾಳು ಆರೋಪಿಸಿದ್ದಾರೆ.
ಗಾಯಾಳುನಿಂದ ಹೇಳಿಕೆ ಪಡೆದುಕೊಂಡಿರುವ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.