ಮಂಗಳೂರು, ಸೆ 27(SM): ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳ ಅನುದಾನದಿಂದ ಶಾಲೆಗಳಿಗೆ ಬಿಸಿಯೂಟಕ್ಕೆ ಸಹಾಯಧನ ವಿತರಿಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂಬ ಕಾರಣಕ್ಕಾಗಿ ದ.ಕ. ಜಿಲ್ಲೆಯ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ಹಾಗೂ ಪುಣಚದ ಶ್ರೀದೇವಿ ವಿದ್ಯಾಕೇಂದ್ರಗಳ ಬಿಸಿಯೂಟ ಸಹಾಯಧನವನ್ನು ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ರದ್ದುಗೊಳಿಸಿತ್ತು.
ಆದರೆ, ಇದೀಗ ಅಧಿಕಾರದಲ್ಲಿರುವ ಸಮ್ಮಿಶ್ರ ಸರಕಾರ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ದೇವರ ಹುಂಡಿ ಹಣವನ್ನು ವರ್ಗಾವಣೆಗೆ ಆದೇಶ ನೀಡಿದ್ದು, ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಸ್ತುತ ರಾಜ್ಯದ ಸರಕಾರಿ ಹಿಂದು ಧಾರ್ಮಿಕ ಸಂಸ್ಥೆ ಹಾಗೂ ದತ್ತಿ ಕಾಯ್ದೆ ಪ್ರಕಾರ ಎ ಗ್ರೇಡ್ ದೇವಳಗಳು ಶೇ. 10, ಬಿ ಗ್ರೇಡ್ ದೇವಳಗಳು ಶೇ. 5ರಷ್ಟು ಅನುದಾನವನ್ನು ಸರಕಾರದ ಸಾಮಾನ್ಯ ನಿಧಿಗೆ ಸಂದಾಯ ಮಾಡುತ್ತದೆ. ಉಳಿದ ಹಣ ದೇವಳದ ಖರ್ಚು ವೆಚ್ಚ, ಅಭಿವೃದ್ಧಿ ಕಾರ್ಯಗಳಿಗೆ ಮಾತ್ರವೇ ಬಳಸಿಕೊಳ್ಳಲು ಅವಕಾಶವಿದೆ. ಇದೇ ಕಾರಣದಿಂದ ಈ ಹಿಂದಿನ ಕಾಂಗ್ರೆಸ್ ಸರಕಾರ ಶಾಲೆಗಳಿಗೆ ವಿತರಣೆಯಾಗುತ್ತಿದ್ದ ಬಿಸಿಯೂಟ ಮತ್ತು ಸಹಾಯಧನ ರದ್ದುಗೊಳಿಸಿತ್ತು.
ಆದರೆ, ಇದೀಗ ಪ್ರಾಕೃತಿಕ ವಿಕೋಪದ ಹೆಸರಿನಲ್ಲಿ ೮೧ ದೇವಸ್ಥಾನಗಳಿಂದ 12.32 ಕೋಟಿ ರೂ.ಗಳನ್ನು ವರ್ಗಾಯಿಸಲು ಸೂಚಿಸಿರುವುದು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನು ಕಳೆದ ವರ್ಷ ಶಾಲೆಯ ಅನುದಾನ ಹಾಗೂ ಬಿಸಿಯೂಟ ಕಡಿತಗೊಳಿಸಿದ ಸಂದರ್ಭ ಸ್ಥಳೀಯ ಸಚಿವರ ಹಾಗೂ ಸರಕಾರದ ವಿರುದ್ಧ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ವಿದ್ಯಾರ್ಥಿಗಳ ಹಸಿವು ನೀಗಿಸಲು ವಿವಿಧ ಸಂಘ ಸಂಸ್ಥೆಗಳು ಮುಂದಾಗಿದ್ದವು. ಕಲ್ಲಡ್ಕ ಹಾಗೂ ಪುಣಚ ಶಾಲೆಗೆ ನೆರವಿನ ಮಹಾಪೂರವೇ ಹರಿದು ಬಂದಿತ್ತು.
ಸರಕಾರದಿಂದ ಹಿಂದೂ ದೇವಸ್ಥಾನಗಳ ಲೂಟಿ:
ಕಲ್ಲಡ್ಕ ಶಾಲಾ ಮಕ್ಕಳ ಅನ್ನ ಕ್ಕೆ ಕಲ್ಲು ಹಾಕಿದ ಸರಕಾರ ನೆರೆ ಸಂತ್ರಸ್ತರ ಹೆಸರಿನಲ್ಲಿ ಹಿಂದೂ ದೇವಸ್ಥಾನಗಳ ಹಣವನ್ನು ಲೂಟಿ ಮಾಡುತ್ತಿದೆ ಇದನ್ನು ನಾವು ಖಂಡಿಸುತ್ತೇವೆ ಎಂದು ಕಲ್ಲಡ್ಕ ಪ್ರಭಾಕರ್ ತಿಳಿಸಿದ್ದಾರೆ. ರಾಜ್ಯದ ಮುಜರಾಯಿ ಇಲಾಖೆ ಸಂಬಂಧಪಟ್ಟ ದೇಗುಲಗಳಿಂದ ೧೨.೩೨ ಕೋಟಿ ರೂಪಾಯಿ ಹಣವನ್ನು ಕಾನೂನು ಮೀರಿ ಸಿಎಂ ಪರಿಹಾರ ನಿಧಿಗೆ ನೀಡುವಂತೆ ರಾಜ್ಯ ಸರ್ಕಾರ ನೀಡಿದ ಆದೇಶಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಕಲ್ಲಡ್ಕ ಭಟ್ ಮಸೀದಿ, ಚರ್ಚ್ ಗಳ ವಕ್ಪ್ ಬೋರ್ಡ್ ನಿರ್ಮಾಣ ಮಾಡಿದಂತೆ ಸರಕಾರ ಹಿಂದೂ ವಕ್ಪ್ ಬೋರ್ಡ್ ಸ್ಥಾಪಿಸಲಿ, ಹಿಂದೂಗಳ ಕೈಗೆ ದೇವಸ್ಥಾನ ಗಳನ್ನು ಕೊಡಿ ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮುಜುರಾಯಿ ಇಲಾಖೆಗೆ ಒಳಪಟ್ಟ ದೇಗುಲದಿಂದ ಮಕ್ಕಳ ಬಿಸಿಯೂಟಕ್ಕೆ ಬರುತ್ತಿದ್ದ ಅನುದಾನವನ್ನು ಕಾನೂನಿನ ನೆಪವೊಡ್ಡಿ ಕಡಿಗೊಳಿಸಿದ್ದ ಈ ಹಿಂದಿನ ರಾಜ್ಯ ಸರ್ಕಾರ ಮತ್ತು ಈಗ ಕಾನೂನನ್ನು ಗಾಳಿಗೆ ತೂರಿ ದೇಗುಲದ ಹಣವನ್ನು ಸಿಎಂ ನಿಧಿಗೆ ಬಳಸಿಕೊಂಡ ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.