ಮಂಗಳೂರು, ಸೆ28(SS): ಆನ್ಲೈನ್ನಲ್ಲಿ ಔಷಧ ಮಾರಾಟ ವಿರೋಧಿಸಿ ಔಷಧ ಮಾರಾಟಗಾರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸೇರಿದಂತೆ ಮಂಗಳೂರಿನಲ್ಲೂ ಬಹುತೇಕ ಔಷಧ ಮಳಿಗೆಗಳ ಸೇವೆ ಸ್ಥಗಿತವಾಗಿದೆ.
ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ಇ-ಫಾರ್ಮಸಿ ವ್ಯವಸ್ಥೆ ವಿರೋಧಿಸಿ ಆಲ್ ಇಂಡಿಯಾ ಆರ್ಗನೈಜೇಷನ್ ಆಫ್ ಕೆಮಿಸ್ಟ್ ಆ್ಯಂಡ್ ಡ್ರಗಿಸ್ಟ್ ಅಸೋಸಿಯೇಷನ್ ಮುಷ್ಕರಕ್ಕೆ ಕರೆ ನೀಡಿದೆ. ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 8 ಲಕ್ಷಕ್ಕೂ ಅಧಿಕ ಔಷಧ ಮಾರಾಟಗಾರರು ಸೇವೆ ಸ್ಥಗಿತಗೊಳಿಸಲಿದ್ದಾರೆ.
ಬೆಂಗಳೂರಿನ 6.5 ಸಾವಿರ ಔಷಧ ಮಳಿಗೆಗಳು ಸೇರಿದಂತೆ ರಾಜ್ಯದ 24 ಸಾವಿರ ಔಷಧ ಮಾರಾಟ ಮಳಿಗೆಗಳು ಬಂದ್ ಆಗಲಿವೆ ಎಂದು ಮೂಲಗಳು ತಿಳಿಸಿದೆ.
ರಾಜ್ಯದ ಕೆಲವೆಡೆ ಔಷಧಾಲಯಗಳ ಮುಷ್ಕರಕ್ಕೆ ಕೆಲವರ ವಿರೋಧವಿದ್ದು, ಔಷಧಾಲಯಗಳನ್ನು ಎಂದಿನಂತೆ ತೆರೆಯುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಔಷಧಾಲಯಗಳ ಮಾಲೀಕರಿಗೆ ಮುಷ್ಕರ ನಡೆಸುವ ಬಗ್ಗೆ ಗೊಂದಲವಿದೆ. ಸುವರ್ಣ ಕರ್ನಾಟಕ ಕೆಮಿಸ್ಟ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್ ಹೆಸರಿನ ಔಷಧ ಮಾರಾಟಗಾರರ ಮುಷ್ಕರಕ್ಕೆ ಬೆಂಬಲ ನೀಡದೆ, ಬೇಡಿಕೆಗಳ ಈಡೇರಿಗೆಗಾಗಿ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ತಿಳಿಸಿದೆ.
ನಗರದ ಎಲ್ಲಾ ಔಷಧಾಲಯಗಳನ್ನು ತೆರೆಯುವ ಮೂಲಕ ಎಂದಿನಂತೆ ಸೇವೆ ನೀಡಲಾಗುವುದು. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಪುರಭವನದ ಎದುರು ಪ್ರತಿಭಟನೆ ನಡೆಸುತ್ತಿದ್ದು, ಔಷಧ ನಿಯಂತ್ರಣ ಮಂಡಳಿ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ರಾಜ್ಯ ಸರಕಾರಿ ಆಸ್ಪತ್ರೆ ಆವರಣದಲ್ಲಿರುವ ಔಷಧಾಲಯಗಳು, ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್, ಕಾರ್ಪೋರೇಟ್ ಆಸ್ಪತ್ರೆಗಳಿಗೆ ಹೊಂದಿಕೊಂಡಿರುವ ಔಷಧ ಮಳಿಗೆಗಳಿಗೆ ಮುಷ್ಕರದಿಂದ ವಿನಾಯಿತಿಯಿದ್ದು, ಅವು ಶುಕ್ರವಾರ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಔಷಧ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಔಷಧಾಲಯಗಳ ಬಂದ್ ಕರೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆ, ತಾಲೂಕು ಮತ್ತು ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜೀವರಕ್ಷಕ ಔಷಧಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ವತಿಯಿಂದ ಈಗಾಗಲೇ ಸೂಚನೆ ನೀಡಲಾಗಿದೆ. ಎಲ್ಲಿಯೂ ಯಾವುದೇ ರೀತಿಯಲ್ಲಿ ಔಷಧ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.