ಬಂಟ್ವಾಳ, ಸೆ28(SS): ಇದೀಗ ಮತ್ತೆ ಕರಾವಳಿಯಲ್ಲಿ ಚರ್ಚು- ಮಂದಿರ ಹೆಸರಿನಲ್ಲಿ ಗಲಾಟೆ ಸೃಷ್ಟಿಸುವ ಹುನ್ನಾರವನ್ನು ದುಷ್ಕರ್ಮಿಗಳು ಮಾಡುತ್ತಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಲಾಳು ಎಂಬಲ್ಲಿ ಕೋಮುಗಲಭೆ ಭಾವನೆಯನ್ನು ಕಿಡಿಗೇಡಿಗಳು ಕೆರಳಿಸುತ್ತಿದ್ದಾರೆ.
ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಲಾಳು ಎಂಬಲ್ಲಿ 1970ರಲ್ಲಿ ಕ್ರೈಸ್ತ ಧರ್ಮಗುರುಗಳಿಂದ ಮೇರಿ ಮಾತೆಯ ಗುಡಿಯೊಂದು ನಿರ್ಮಾಣವಾಗಿತ್ತು. 1970ಲ್ಲಿ ನಿರ್ಮಾಣವಾಗಿದ್ದ ಈ ಗುಡಿ ಶಿಥೀಲಾವಸ್ಥೆಗೆ ಸೇರಿತ್ತು. ಈ ಹಿನ್ನೆಲೆ ಸ್ಥಳೀಯ ಕ್ರೈಸ್ತರು ಸೇರಿದಂತೆ ಧರ್ಮಗುರುಗಳು ಮತ್ತೆ ಮೇರಿ ಮಾತೆಯ ಗುಡಿಯನ್ನು ಪುನರ್ ನಿರ್ಮಿಸಲು ಮಾತುಕತೆ ನಡೆಸಿದ್ದರು. ಮಾತ್ರವಲ್ಲ, ಹಿಂದೆ ಇದ್ದ ಜಾಗದಲ್ಲಿ ಕೆಲಸ ಆರಂಭಿಸಿದ್ದರು.
ಮೇರಿ ಮಾತೆಯ ಗುಡಿಗೆ ಕಾಂಕ್ರೀಟಿಕರಣ ಮಾಡಲು ಯೋಜನೆ ಆರಂಭವಾಗುತ್ತಿದ್ದಂತೆ, ಕೆಲ ಜನ ವಿರೋಧ ವ್ಯಕ್ತಪಡಿಸಿದ್ದರು. ಈ ನಡುವೆ ಆಕ್ರೋಶಗೊಂಡ ಕಿಡಿಗೇಡಿಗಳು ರಾತ್ರೋರಾತ್ರಿ ಮೇರಿ ಮಾತೆಯ ಗುಡಿ ಧ್ವಂಸ ಮಾಡಿದ್ದಾರೆ.
ಮಾತ್ರವಲ್ಲ ನಿನ್ನೆ ತಡರಾತ್ರಿ ಕಿಡಿಗೇಡಿಗಳು ಮೇರಿ ಮಾತೆಯ ಗುಡಿ ಇದ್ದ ಜಾಗದಲ್ಲಿ ಕೇಸರಿ ಧ್ವಜ ಹಾರಿಸಿ ಕೋಮುಗಲಭೆ ಭಾವನೆಯನ್ನು ಕೆರಳಿಸುವ ಹುನ್ನಾರ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.