ಮಂಗಳೂರು, ಸೆ28(SS): ಆರೋಗ್ಯ, ಶಿಕ್ಷಣ, ಉದ್ಯೋಗವನ್ನು ಗುರಿಯಾಗಿಟ್ಟುಕೊಂಡು ಸಾರ್ವಜನಿಕರಿಗೆ ಇದರ ಮಹತ್ವ ಮತ್ತು ಸರಕಾರದಿಂದ ಸಿಗುವ ಯೋಜನೆ ಸವಲತ್ತುಗಳ ಬಗ್ಗೆ ಮಾಹಿತಿ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಮೂಡುಶೆಡ್ಡೆ ಎದುರುಪದವು ಗ್ರಾಮದ ಯುವಕರು "ವಿಶನ್ ಸೆಂಟರ್" ಸಂಸ್ಥೆಯನ್ನು ಸ್ಥಾಪಿಸಿದ್ದು, ಇದರ ನೂತನ ಕಚೇರಿಯನ್ನು ಮೂಡುಶೆಡ್ಡೆ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಉದ್ಘಾಟಿಸಿದರು.
ಕಚೇರಿ ಉದ್ಘಾಟನೆಯನ್ನು ಸ್ಥಳೀಯ ಉದ್ಯಮಿ ಮತ್ತು ಸಮಾಜ ಸೇವಕ ಎಸ್ ಆಲಿಯಬ್ಬ ಮತ್ತು ಮೂಡುಶೆಡ್ಡೆ ಮಸೀದಿ ಅಧ್ಯಕ್ಷರಾದ ಶರೀಫ್ ನೆರವೇರಿಸಿದರು. ಬಳಿಕ ಮಾತನಾಡಿದ ಎಸ್ ಆಲಿಯಬ್ಬ, ಈ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸರಕಾರದಿಂದ ಲಭಿಸುವ ಕೆಲ ಸವಲತ್ತುಗಳ ಬಗ್ಗೆ ಇನ್ನೂ ಕೂಡ ಸರಿಯಾದ ಮಾಹಿತಿ ಇಲ್ಲ. ಇದನ್ನು ಕೆಲವೊಂದು ಸೈಬರ್ ಸೆಂಟರ್ ದುರ್ಬಳಕೆ ಮಾಡುತ್ತಿದೆ. ಅದರಲ್ಲೂ ಮುಖ್ಯವಾಗಿ ಅಲ್ಪ ಸಂಖ್ಯಾತರಿಗೆ ದೊರಕುವ ವಿದ್ಯಾರ್ಥಿ ವೇತನದ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಹಣ ಪಡೆಯುವ ಮೂಲಕ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಅಲೆದಾಡುವಂತೆ ಮಾಡುತ್ತಿದೆ. ಅದಕ್ಕಾಗಿ ಸ್ಥಳೀಯ ಯುವಕರು ಇದನ್ನು ನಿಲ್ಲಿಸುವ ಉದ್ದೇಶದಿಂದ "ವಿಶನ್ ಸೆಂಟರ್" ಸ್ಥಾಪಿಸಿದ್ದಾರೆ. ಯುವಕರ ಈ ಕೆಲಸ ಶ್ಲಾಘನೀಯ ಎಂದವರು ಹೇಳಿದರು.
ಈ ವೇಳೆ ಮೂಡುಶೆಡ್ಡೆ ಮಸೀದಿ ಅಧ್ಯಕ್ಷರಾದ ಶರೀಫ್ ಮಾತನಾಡಿ, ಇಲ್ಲಿನ ಜನರು ಕೆಲವೊಂದು ಸರಕಾರದ ಯೋಜನೆಗಳಿಗಾಗಿ ಮಂಗಳೂರಿನ ಕೆಲ ಸೈಬರ್ ಮತ್ತು ಸರಕಾರಿ ಕಚೇರಿಗಳಿಗೆ ಅಲೆದಾಡುತ್ತಾರೆ. ಈ ಬಗ್ಗೆ ನನಗೆ ಕೆಲ ಜನರು ಮಾಹಿತಿ ನೀಡಿದ್ದಾರೆ. ಹಾಗಾಗಿ ಇದರ ಬಗ್ಗೆ ಕೆಲ ಯುವಕರಲ್ಲಿ ನಾನು ಚರ್ಚಿಸಿದ್ದೆ. ನನಗೂ ಸರಕಾರದ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲ. ಆದರೆ ಇಲ್ಲಿನ ಯುವಕರು ಈ ಸಮಸ್ಯೆಯನ್ನು ಗಂಭಿರವಾಗಿ ಪರಿಗಣಿಸಿ ಈ ಭಾಗದಲ್ಲಿ ಒಂದು ಉತ್ತಮ ಗುಣಮಟ್ಟದ ಮತ್ತು ಒಳ್ಳೆಯ ಯೋಜನೆಗಳ ಮೂಲಕ ಜನ ಸೇವೆಗೆ ಮುಂದಾಗಿದ್ದಾರೆ. ಇದು ಸಂತಸದ ವಿಷಯ. ಅದರಲ್ಲೂ ಯಾವುದೇ ಫಲಾಪೇಕ್ಷೆ ಇಲ್ಲದೆ ಉಚಿತ ಸೇವೆಗಳನ್ನು ನೀಡಲು ಈ ಸಂಸ್ಥೆ ಮುಂದಾಗಿರುವುದು ಈ ಭಾಗದ ಜನರಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.
ಈ ಸಂದರ್ಭ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಿಗುವ ಸವತ್ತು ಮತ್ತು ವಿದ್ಯಾರ್ಥಿ ಜೀವನದ ಮಹತ್ವದ ಬಗ್ಗೆ ಅಡ್ವಕೇಟ್ ಇಲ್ಯಾಸ್ ವಾಮಂಜೂರು ನೆರೆದವರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮಸೀದಿ ಖತೀಬರು ಮತ್ತು ನಾಗರಿಕರು ಉಪಸ್ಥಿತರಿದ್ದರು.