ಉಳ್ಳಾಲ, ಅ 7: ಮುಕ್ಕಚ್ಚೇರಿಯ ಕಿಲೇರಿಯಾ ನಗರದಲ್ಲಿರುವ ಜುಬೈರ್ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ, ಜುಬೈರ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸಚಿವ ಖಾದರ್ ಅವರಿಗೆ ಘೇರಾವ್ ಹಾಕಿದ ಅರ್ಧ ಗಂಟೆಯಲ್ಲಿಯೇ, ಮುಕ್ಕಚ್ಚೇರಿಯ ಜುಬೈರ್ ಮನೆಗೆ ಸಂಸದ ನಳಿನ್ ಆಗಮಿಸಿದ್ದು ಮನೆಮಂದಿಗೆ ಸಾಂತ್ವನ ಹೇಳಿದರಲ್ಲದೆ, ಜುಬೈರ್ ಹತ್ಯೆಯನ್ನುತೀವ್ರವಾಗಿ ಖಂಡಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಜುಬೈರ್ ಅವರನ್ನು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ. ಕೇರಳದ ಪ್ರಬಲ ಶಕ್ತಿಗಳಿಂದ ಈ ಹತ್ಯೆ ನಡೆದಿದೆ. ಜೊತೆಗೆ ಕರ್ನಾಟಕದಲ್ಲಿ ಜಂಗಲ್ ರಾಜ್ ನಿರ್ಮಾಣವಾಗುತ್ತಿದೆ. ಅಮಾಯಕ ಜನರ ಹತ್ಯೆಯಾಗುತ್ತಿದ್ದರೂ, ರಾಜಕೀಯ ಶಕ್ತಿಗಳಿಂದ ಮುಚ್ಚಿ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೃತ ಜುಬೈರ್ ಕುಟುಂಬಕ್ಕೆ ರಾಜ್ಯ ಸರಕಾರ ಕನಿಷ್ಟ 50 ಲಕ್ಷ ಪರಿಹಾರವನ್ನು ಒದಗಿಸಬೇಕು. ಮಾತ್ರವಲ್ಲ, ಜುಬೈರ್ ಕೊಲೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಹಂತಕರ ಬಂಧನದಲ್ಲಿ ಪೊಲೀಸರನ್ನು ನಿಯಂತ್ರಿಸಲು ಸರಕಾರ ಯತ್ನಿಸಿದರೆ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.