ಮಂಗಳೂರು, ಸೆ 28(SM): ಕರ್ನಾಟಕ ಗೃಹ ಮಂಡಳಿಯಿಂದ ಪಡೆದಿದ್ದ ಸಾಲ ಮರುಪಾವತಿಯಾದ ಬಳಿಕ, ನೀಡಿದ ಮೂಲ ದಾಖಲೆಗಳನ್ನು ಹಿಂದಿರುಗಿಸಲು ಮತ್ತು ನಿರಕ್ಷೇಪಣಾ ಪತ್ರವನ್ನು ಒದಗಿಸಲು ಲಂಚಕ್ಕೆ ಬೇಡಿಕೆ ಇಟ್ಟ ಗೃಹ ಮಂಡಳಿ ನಿಗಮದ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.
ಮಂಗಳೂರು ಕರ್ನಾಟಕ ಗೃಹ ಮಂಡಳಿಯ ಸಹಾಯಕ ಕಂದಾಯ ಅಧಿಕಾರಿ ಶ್ರೀನಿವಾಸ್ ಶೆಟ್ಟಿ ಅಮಾನತುಗೊಂಡ ಅಧಿಕಾರಿಯಾಗಿದ್ದಾರೆ. ಬಜ್ಪೆಯ ಅದ್ಯಪಾಡಿ ನಿವಾಸಿ ಗಂಗಾಧರ ದೂರುದಾರರು. ಇವರ ಪೂರ್ವಿಕರು ಕರ್ನಾಟಕ ಗೃಹ ಮಂಡಳಿಯಲ್ಲಿ ಸಾಲ ಪಡೆದಿದ್ದರು. ಸಾಲ ಮರುಪಾವತಿಯಾದ ಬಳಿಕ ನೀಡಿದ ಮೂಲ ದಾಖಲೆಗಳನ್ನು ಹಿಂದಿರಿಗಿಸಲು ಮತ್ತು ನಿರಕ್ಷೇಪಣಾ ಪತ್ರವನ್ನು ಒದಗಿಸಲು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕರ್ನಾಟಕ ಗೃಹ ಮಂಡಳಿ ನಿಗಮಕ್ಕೆ ಮನವಿ ಸಲ್ಲಿಸಿದ್ದರು.
ಆದರೆ, ಇವುಗಳನ್ನು ನೀಡಲು ಇಲಾಖೆಯ ಕಾರ್ಯಪಾಲಕ ಅಭಿಯಂತರ ವಿಜಯ ಕುಮಾರ್ ಹಾಗೂ ಸಹಾಯಕ ಕಂದಾಯ ಅಧಿಕಾರಿ ಶ್ರೀನಿವಾಸ್ ಶೆಟ್ಟಿ, ಗಂಗಾಧರ ಅವರಲ್ಲಿ 20,000 ರೂಪಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ನಡುವೆ ಮಾತುಕತೆ ನಡೆಸಿ ಅಧಿಕಾರಿಗಳಿಬ್ಬರು 12,000 ಕ್ಕೆ ಒಪ್ಪಿಕೊಂಡಿದ್ದಾರೆ.ಹಾಗೂ ಸ್ಥಳದಲ್ಲೇ 2,000 ಹಣ ಪಡೆದಿದ್ದು ಬಾಕಿ ಉಳಿದ 10,000 ಹಣವನ್ನು ಮರುದಿನ ನೀಡುವುದಾಗಿ ಗಂಗಾಧರ ತಿಳಿಸಿದ್ದಾರೆ. ಆದರೆ, ಅಲ್ಲಿಂದ ಹೊರಟ ಗಂಗಾಧರಾವರು ನೇರ ಭ್ರಷ್ಟಾಚಾರ ನಿಗ್ರಹ ದಳ ಕಚೇರಿಗೆ ಹೋಗಿ ದೂರು ನೀಡಿದ್ದಾರೆ.
ಬಳಿಕ ಮಂಗಳೂರಿನ ಕಾವೂರಿನಲ್ಲಿರುವ ಕರ್ನಾಟಕ ಗೃಹ ಮಂಡಳಿ ನಿಗಮದ ಕಚೇರಿಗೆ ಲಂಚದ ಹಣವನ್ನು ತೆಗೆದುಕೊಂಡು ಗಂಗಾಧರ್ ತೆರಳಿದ್ದಾರೆ. ಈ ಸಂದರ್ಭ ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ ಅಭಿಯಂತರ ವಿಜಯ ಕುಮಾರ್ ಕಚೇರಿಯಲ್ಲಿ ಇರದೆ ಹೊರಗಡೆ ತೆರಳಿದ್ದರು. ಕಚೇರಿಯಲ್ಲಿದ್ದ ಸಹಾಯಕ ಕಂದಾಯ ಅಧಿಕಾರಿ ಶ್ರೀನಿವಾಸ ಶೆಟ್ಟಿ ಅವರು ಲಂಚದ ಹಣ ಪಡೆಯುತ್ತಿದ್ದಾಗ, ದಕ್ಷಿಣ ಕನ್ನಡ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಾಗೂ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.
ದಾಳಿಯ ಬಗ್ಗೆ ಮಾಹಿತಿ ಪಡೆದ ಕಾರ್ಯಪಾಲಕ ಅಭಿಯಂತರ ವಿಜಯ ಕುಮಾರ್ ಪರಾರಿಯಾಗಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಶೃತಿ ಎನ್.ಎಸ್, ಡಿವೈಸ್ಪಿ ಸುಧೀರ್ ಎಮ್.ಹೆಗ್ಡೆ, ಇನ್ಸ್ಪೆಕ್ಟರ್ ಯೊಗೀಶ್ ಕುಮಾರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.