ಬಂಟ್ವಾಳ, ಸೆ29(SS): ಮಾತೆ ಮೇರಿಯ ಮೂರ್ತಿಯನ್ನಿಟ್ಟು ಕ್ರೈಸ್ತರು ಆರಾಧನೆ ಮಾಡುತ್ತಿದ್ದ ಸ್ಥಳಕ್ಕೆ ದುಷ್ಕರ್ಮಿಗಳು ದಾಳಿ ಮಾಡಿ ಕೊರಗಜ್ಜ ದೈವದ ಮೂರ್ತಿ ಇರಿಸಿದ ಘಟನೆ ಬಂಟ್ವಾಳ ತಾಲೂಕಿನ ಕುಂಟ್ರಕಳ ಎಂಬಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪದ ಆರೋಪದಡಿ ವಿಟ್ಲ ಬೀಟ್ ಪೊಲೀಸ್ ಅಶೋಕ್ ಅವರನ್ನು ಅಮಾನತು ಮಾಡಲಾಗಿದೆ.
ಅಶೋಕ್ ಕೊಳ್ನಾಡು ಗ್ರಾಮದ ಬೀಟ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ದ.ಕ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವಿಕಾಂತೇ ಗೌಡ ಅಮಾನತು ಮಾಡಲು ಆದೇಶ ಮಾಡಿದ್ದಾರೆ.
ಘಟನೆಯ ವಿವರ:
ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಳಾಲು ಎಂಬಲ್ಲಿ 1970ರಲ್ಲಿ ಕ್ರೈಸ್ತ ಧರ್ಮಗುರುಗಳಿಂದ ಮೇರಿ ಮಾತೆಯ ಗುಡಿಯೊಂದು ನಿರ್ಮಾಣವಾಗಿತ್ತು. 1970ಲ್ಲಿ ನಿರ್ಮಾಣವಾಗಿದ್ದ ಈ ಗುಡಿ ಶಿಥಿಲವಾಗಿತ್ತು. ಈ ಹಿನ್ನೆಲೆ ಸ್ಥಳೀಯ ಕ್ರೈಸ್ತರು ಸೇರಿದಂತೆ ಧರ್ಮಗುರುಗಳು ಮತ್ತೆ ಮೇರಿ ಮಾತೆಯ ಗುಡಿಯನ್ನು ಪುನರ್ ನಿರ್ಮಿಸಲು ಮಾತುಕತೆ ನಡೆಸಿದ್ದರು. ಮಾತ್ರವಲ್ಲ, ಹಿಂದೆ ಇದ್ದ ಜಾಗದಲ್ಲಿ ಕೆಲಸ ಆರಂಭಿಸಿದ್ದರು. ಮೇರಿ ಮಾತೆಯ ಗುಡಿಗೆ ಕಾಂಕ್ರೀಟಿಕರಣ ಮಾಡಲು ಯೋಜನೆ ಆರಂಭವಾಗುತ್ತಿದ್ದಂತೆ, ಕೆಲ ಕಿಡಿಗೇಡಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ, ರಾತ್ರೋರಾತ್ರಿ ಮೇರಿ ಮಾತೆಯ ಗುಡಿ ಧ್ವಂಸ ಮಾಡಿದ್ದರು.
ಕಿಡಿಗೇಡಿಗಳು ಮೇರಿ ಮಾತೆಯ ಗುಡಿ ಇದ್ದ ಜಾಗದಲ್ಲಿ ಕೇಸರಿ ಧ್ವಜ ಹಾರಿಸಿ ಕೋಮುಗಲಭೆ ಭಾವನೆಯನ್ನು ಕೆರಳಿಸುವ ಹುನ್ನಾರ ನಡೆಸಿದ್ದರು.ಮಾತ್ರವಲ್ಲ, ಗ್ರೋಟ್ಟೊ ಕೆಡವಿ ಆ ಜಾಗದಲ್ಲಿ ಕೊರಗಜ್ಜನ ಕಟ್ಟೆ ನಿರ್ಮಿಸಿ ಸ್ಥಳದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಿದ್ದರು.