ದುಬೈ, ಅ 7: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟೂ ಸದ್ದು ಮಾಡಿ ಚಿತ್ರರಸಿಕರ ಮನಗೆದ್ದಿರುವ ಮಾರ್ಚ್ 22 ಸಿನಿಮಾ ಶುಕ್ರವಾರ ದುಬೈ, ಶಾರ್ಜಾ, ಅಬುಧಾಬಿ ಸೇರಿದಂತೆ ಯುಎಇ ಯಾದ್ಯಂತ ಬಿಡುಗಡೆಗೊಂಡಿದೆ.
ಮಂಗಳೂರು ಮೂಲದ ನಿರ್ಮಾಪಕರಾದ ದುಬೈನ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಾಣದ ಈ ಚಿತ್ರವು ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದು, ಸಿನಿ ಪ್ರಿಯರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಕೂಡ್ಲು ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಕರ್ನಾಟಕ ರಾಜ್ಯಾದ್ಯಂತ ಸಿನಿಪ್ರಿಯರ ಹಾಗೂ ಮಾಧ್ಯಮಗಳ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.
ವಿಭಿನ್ನ ಕಥೆಯನ್ನಿಟ್ಟುಕೊಂಡು ಮಾಡಿರುವ ಈ ಸಿನಿಮಾದ ಮೊದಲ ಪ್ರದರ್ಶನ ವಿದೇಶದಲ್ಲೂ ಯಶಸ್ವಿ ಕಂಡಿದೆ. ದುಬೈಯ ಹಯಾತ್ ರೆಜೆನ್ಸಿಯ ಗೆಲ್ಲೆರಿಯ ಸಿನಿಮಾ ಮಂದಿರದಲ್ಲಿ ಶುಕ್ರವಾರ ಬೆಳಗ್ಗೆ ಮೊದಲ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಮೊದಲ ಪ್ರದರ್ಶನವನ್ನು ಸಿನಿಮಾ ನಿರ್ಮಾಪಕರಾದ ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ಸಮ್ಮುಖದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಅನಂತ್ ನಾಗ್ ಅವರ ಧರ್ಮ ಪತ್ನಿ, ಹಿರಿಯ ನಟಿ ಗಾಯತ್ರಿ ಅನಂತ್ ನಾಗ್, ರಂಗತರಂಗಿ ಖ್ಯಾತಿಯ ನಟಿ ರಾಧಿಕಾ ಚೇತನ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಸುವರ್ಣ ಸತೀಶ್, ದಿನೇಶ್ ಶೇರಿಗಾರ್ ಉಪಸ್ಥಿತರಿದ್ದರು.
ಹೌಸ್ ಫುಲ್ ಪ್ರದರ್ಶನ
ಯುಎಇಯಲ್ಲಿ ಸದಾ ಕೆಲಸದ ಒತ್ತಡದಲ್ಲಿರುವ ಕನ್ನಡಿಗರು ಈ ಸಿನಿಮಾವನ್ನು ನೋಡುವ ತವಕದಲ್ಲಿ ಮುಂಜಾನೆಯೇ ಸಿನಿಮಾ ಮಂದಿರದ ಮುಂದೆ ಜಮಾಯಿಸಿದ್ದರು. ದುಬೈಯ ಹಯಾತ್ ರೆಜೆನ್ಸಿಯ ಗೆಲ್ಲೆರಿಯ ಸಿನಿಮಾ ಮಂದಿರಕ್ಕೆ ಅನಂತ್ ನಾಗ್, ಗಾಯತ್ರಿ, ರಾಧಿಕಾ ಚೇತನ್ ಬರುತ್ತಿದ್ದಂತೆ ಅಭಿಮಾನಿಗಳು ಪ್ರೀತಿಯಿಂದ ಚಿತ್ರ ಕಲಾವಿದರನ್ನು ಸ್ವಾಗತಿಸಿದರು.