ವಿಟ್ಲ, ಸೆ 30 (MSP): ಕೊಳಾಡು ಗ್ರಾಮದ ಕುಂಟ್ರಕಳ ಎಂಬಲ್ಲಿ ಕ್ರೈಸ್ತ ಸಮುದಾಯಕ್ಕೆ ಸೇರಿದ ಪ್ರಾರ್ಥನಾಲಯ ದ್ವಂಸ ಮಾಡಿ ಕಟ್ಟೆ ನಿರ್ಮಿಸಿ ಕೇಸರಿ ದ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಗೆ ವಿಟ್ಲಾ ಠಾಣೆಯ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ಖಡಕ್ ವಾರ್ನಿಂಗ್ ನೀಡಿದ್ದು, ಇದರ ವಿಡಿಯೋ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಡು ಸಮುದಾಯದ ಸ್ಥಳೀಯರಿಗೆ ಸೌಹಾರ್ದತೆಯ ಪಾಠ ಮಾಡಿದ ಇನ್ಸ್ಪೆಕ್ಟರ್, ನಿಮ್ಮ ಎರಡು ಸಮುದಾಯದ ಕಡೆಯಲ್ಲಿಯೂ ಇರೋದು ಧಾರ್ಮಿಕತೆ ಅಲ್ಲ, ಧಾರ್ಮಿಕ ವೈಷಮ್ಯ ಎನ್ನುವ ಎಚ್ಚರಿಕೆ ನೀಡಿದ್ರು. ನೀವು ನಂಬುವ ಕೊರಗಜ್ಜನಿಗೆ ಎಷ್ಟು ಗೌರವ ಇದೆಯೋ ಅಷ್ಟೇ ಗೌರವ ಕ್ರೈಸ್ತರ ಗ್ರೊಟ್ಟೋಗೂ ಇದೆ, ಮುಸ್ಲಿಂರ ಮಸೀದಿಗೂ ಇದೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ನಾವು ಖಾಕಿ ಧರಿಸಿದವರು. ನಮ್ಮ ಕಣ್ಣಿಗೆ ಎಲ್ಲರೂ ಸಮಾನ. ನಮಗೆ ಎಲ್ಲವೂ ಒಂದೇ. ಸಮಾಜದಲ್ಲಿ ಎಲ್ಲದಕ್ಕೂ ಒಂದು ರೀತಿ ನೀತಿ ಇದೆ. ಕಾನೂನಿನ ಪ್ರಕಾರ ನಡೆದುಕೊಳ್ಳುವುದನ್ನು ಮೊದಲು ಕಲಿಯಿರಿ. ಅತಿಕ್ರಮವಾಗಿ ಸರ್ಕಾರಿ ಜಾಗದಲ್ಲಿ ಕಟ್ಟುವುದು ಮತ್ತು ಕೆಡವುದು ಎರಡು ಕೂಡಾ ತಪ್ಪೇ..ಎರಡು ಕಡೆಯವರೂ ಅನಾವಶ್ಯಕವಾಗಿ ಗೊಂದಲಗಳನ್ನು ಹುಟ್ಟುಹಾಕುತ್ತಿದ್ದೀರಿ ಎಂದು ತಿಳಿಹೇಳಿದರು.
ಬಳಿಕ ಎರಡು ಗುಂಪುಗಳಿಗೂ ಖಡಕ್ ವಾರ್ನಿಂಗ್ ನೀಡಿದ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್, ಯಾರೂ ಕೂಡಾ ವಿಷಬೀಜ ಬಿತ್ತುವ ಕೆಲಸ ಮಾಡಬೇಡಿ. ಎರಡು ಕಡೆಯ ಅಹವಾಲು ಸ್ವೀಕರಿಸಿದ್ದೇವೆ. ಕಾನೂನನ್ನು ಗೌರವಿಸಿ ಪಾಲಿಸಿ, ಇಲ್ಲಿನ ಸಮಸ್ಯೆಯನ್ನು ಸರ್ಕಾರ ಬಗೆಹರಿಸುತ್ತದೆ ಎಂದು ಭರವಸೆ ನೀಡಿದ್ರು. ಇವೆಲ್ಲವನ್ನೂ ಮೀರಿ ಇಲ್ಲಿ ಸಮಸ್ಯೆ, ಗೊಂದಲ ಮಾಡ್ತೀವಿ ಅನ್ನೋದಾದ್ರೆ ನಿಮ್ಮ ತಾಕತ್ತು ಎಷ್ಟಿದೆ ನೋಡ್ವಾ..ನಮ್ಮ ತಾಕತ್ತೂ ನೋಡ್ವಾ.! ಎಂಬ ಎಚ್ಚರಿಕೆಯ ಮಾತುಗಳನ್ನು ರವಾನಿಸಿದರು. ಇದು ಸರ್ಕಾರದ ಜಾಗ , ಇಲ್ಲಿ ಪೊಲೀಸರನ್ನು ಹಾಗೂ ಸರ್ಕಾರಿ ಅಧಿಕಾರಿಗಳನ್ನು ನೇಮಿಸಲಾಗಿದೆ . ಇದನ್ನು ಮೀರಿ ಸ್ಥಳದಲ್ಲಿ ಅಥವಾ ಊರಿನಲ್ಲಿ ಯಾರಾದ್ರೂ ಕಿತಾಪತಿ ಮಾಡಿದ್ರೆ ಜೋಕೇ..ನಮ್ಮ ಪೊಲೀಸ್ ಪವರ್ ತೋರಿಸಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದ್ರು.