ವಿಶೇಷ ವರದಿ: ಮಾನಸ
ಸಿದ್ದಾಪುರ, ಸೆ 30 (MSP): ವಿಚಿತ್ರ ವೇಷ ಧರಿಸುವ ಸ್ವರ್ಧೆ, ಟೊಮೋಟೋ ಎಸೆಯುವ ಸ್ವರ್ಧೆ, ಹೊಟ್ಟೆ ಬಿರಿಯುವಂತೆ ತಿನ್ನುವ ಸ್ವರ್ಧೆ..ಹೀಗೆ ಪ್ರಪಂಚದಾದ್ಯಂತ ಮನರಂಜನೆಗಾಗಿ ಚಿತ್ರ ವಿಚಿತ್ರ ಸ್ಪರ್ಧೆಗಳು ನಡೆಯುವ ಬಗ್ಗೆ ಆಗಾಗ ವರದಿಯಾಗುತ್ತಿರುತ್ತವೆ. ಇನ್ನು ಕರಾವಳಿಯಲ್ಲಂತೂ ಕೆಸರು ಗದ್ದೆ ಆಟ, ಕಂಬಳ, ಕೋಳಿಅಂಕದ ಆಟ ಸಾಮಾನ್ಯ.. ಆದ್ರೆ ಇಲ್ಲೊಬ್ಬರು ಇದಕ್ಕಿಂತ ಭಿನ್ನವಾಗಿ ವಿನೂತನ ಸ್ವರ್ಧೆ ಏರ್ಪಡಿಸಿದ್ದಾರೆ. ಅದೆನೇಂದರೆ ಮೊಬೈಲ್ ಎಸೆಯುವ ಸ್ಪರ್ಧೆ.. ಹೌದು ಹುಬ್ಬು ಮೇಲೇರಿಸಬೇಡಿ.. ಇದು ಶೇಕಡಾ ನೂರರಷ್ಟು ಸತ್ಯ ವಿಚಾರ .. ಇಲ್ಲಿಗೆ ಬಂದು ಮೊಬೈಲ್ ಎಸೆದು ನೀವು ವಿಜೇತರಾಗಿದ್ದೀರಿ ಅಂದ್ರೆ ಹೊಚ್ಚ ಹೊಸ ಸ್ಮಾರ್ಟ್ ಫೋನ್ ನಿಮ್ಮ ಜೇಬಿಗಿಳಿಸಬಹುದು.
ಸ್ವರ್ಧೆಯ ಆಯೋಜಕ - ರೂಪೇಶ್ ಕುಮಾರ್
ಇತ್ತೀಚೆಗಂತು ಮೊಬೈಲ್ ಫೋನ್ ಜೀವನದ ಅವಿಭಾಜ್ಯ ಅಂಗವಾಗಿದೆ. ಹೀಗಿರುವಾಗ ಪೋನ್ ಯಾರಾದ್ರೂ ಎಸೆಯುತ್ತಾರೆ?ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ನಿಮ್ಮಲ್ಲಿರುವ ಹಳೆಯ ಯಾವುದೇ ಸ್ಥಿತಿಯಲ್ಲಿರುವ ಮೊಬೈಲ್ ಪೋನ್ ಎಸೆದರೆ ಸಾಕು, ಅತೀ ಹೆಚ್ಚು ದೂರ ಸಾಗಿತೆಂದರೆ ಅವರೇ ವಿಜೇತರು. ಇಂತಹ ಒಂದು ವಿಭಿನ್ನ ಸ್ಪರ್ಧೆಯ ಯೋಚನೆ ಬಂದಿದ್ದು ಗೋಳಿಯಂಗಡಿಯ ರೂಪೇಶ್ ಕುಮಾರ್ ಅವರಿಗೆ..
ಇಲ್ಲಿ ನಡೆಯಲಿದೆ ಸ್ವರ್ಧೆ
ಅಕ್ಟೋಬರ್ 7ರಂದು ಗೋಳಿಯಂಗಡಿ ಮತ್ತು ವಂಡಾರು ಮಾವಿನಕಟ್ಟೆ ಪ್ರಗತಿ ಎಂಟರ್ ಪ್ರೈಸಸ್ ಸಹಯೋಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣ ವಠಾರದಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಈ ಸ್ವರ್ಧೆ ನಡೆಯಲಿದೆ. ಅಂದಹಾಗೆ ಗೋಳಿಯಂಗಡಿ ಹೆಬ್ರಿ-ಪಾಲಾಡಿ- ಕುಂದಾಪುರ ದಾರಿ ಮದ್ಯೆ ಸಿಗುತ್ತದೆ. ಪ್ರಸಿದ್ದ ಮಂದಾರ್ತಿ ದೇವಸ್ಥಾನದಿಂದ ಗೋಳಿಯಂಗಡಿಗೆ ಇರುವುದು ಕೇವಲ 12 ಕಿ.ಮೀಗಳ ದೂರವಷ್ಟೇ..
ಸ್ವರ್ಧೆಯ ನಿಯಮ
ಈ ಸ್ಪರ್ಧೆಯ ನಿಯಮದ ಪ್ರಕಾರ ನಿಮ್ಮಲ್ಲಿರುವ ಯಾವುದೇ ಹಾಳಾದ ಸ್ಕ್ರಾಪ್ ಹ್ಯಾಂಡ್ ಸೆಟ್ ಗಳನ್ನು ತಂದು ಎಸೆಯಬಹುದು. ಸ್ವರ್ಧೆಯಲ್ಲಿ ಭಾಗವಹಿಸುವವರಿಗೆ ಯಾವುದೇ ವಯಸ್ಸಿನ ನಿಭಂದನೆಗಳಿಲ್ಲ. ಮಹಿಳೆಯರು ಪುರುಷರು ಮಕ್ಕಳು ಎನ್ನುವ ತಾರರಮ್ಯವಿಲ್ಲದೆ ಯಾರಾದರೂ ಭಾಗವಹಿಸಬಹುದು. ಬಹುದೂರ ಎಸೆದವರಿಗೆ ಪ್ರಥಮ ಬಹುಮಾನ. ಒಬ್ಬ ಸ್ಪರ್ಧಾಳು ಎಷ್ಟು ಪೋನ್ ಗಳನ್ನಾದರೂ ಎಸೆಯಬಹುದು..ಆದರೆ ಎಸೆದ ಫೋನ್ ಗಳನ್ನು ಮಾತ್ರ ಹಿಂತಿರುಗಿಸಲಾಗುವುದಿಲ್ಲ.. ಷರತ್ತುಗಳು ಅನ್ವಯ ಎನ್ನುತ್ತಾರೆ ಸ್ವರ್ಧೆಯ ಆಯೋಜಕರು.
ಪ್ರಥಮ ಬಹುಮಾನ 4ಜಿ ಸ್ಮಾರ್ಟ್ ಫೋನ್
ಈ ಸ್ಪರ್ಧೆಯ ನಿಯಮದ ಪ್ರಕಾರ ಶಾಟ್ ಪುಟ್ ಆಟದಂತೆ, ಬಹುದೂರದವರೆಗೆ ಫೋನ್ ಎಸೆಯುವ ಸ್ಪರ್ಧಾಳುವಿಗೆ ಪ್ರಥಮ ಬಹುಮಾನ ನೀಡಲಾಗುತ್ತದೆ. ಫಸ್ಟ್ ಪ್ರೈಜ್ ಆಗಿ ಬ್ರಾಂಡೆಡ್ 4 ಜಿ ಸ್ಮಾರ್ಟ್ ಫೋನ್ ಹಾಗೂ ದ್ವಿತೀಯ ಬಹುಮಾನವಾಗಿ ಆಂಡ್ರಾಯಿಡ್ ಮೊಬೈಲ್ ನೀಡಲು ಸ್ಪರ್ಧೆಯ ಆಯೋಜಕರು ತೀರ್ಮಾನಿಸಿದ್ದಾರೆ. ಸ್ವರ್ಧೆ ನಡೆದ ದಿನವೇ ಸಂಜೆ ಸ್ಥಳದಲ್ಲೇ ಬಹುಮಾನ ವಿತರಿಸಲಾಗುತ್ತದೆ.
ಇನ್ನು ಈ ಸ್ವರ್ಧೆಯ ಆಯೋಜಕರಾದ ರೂಪೇಶ್ ಕುಮಾರ್ ಅವರನ್ನು’ದಾಯ್ಜಿ ವಲ್ಡ್’ ಸಂಪರ್ಕಿಸಿದಾಗ ಅವರು ಹೇಳಿದ್ದು ಹೀಗೆ - ಈ ಸ್ಪರ್ಧೆ ಮನರಂಜನೆಗೋಸ್ಕರ ಏರ್ಪಡಿಸಲಾಗಿದೆಯಾದರೂ ಇಲ್ಲಿ ಇ-ತ್ಯಾಜ್ಯದ ಮರುಬಳಕೆಯ ಉದ್ದೇಶವಿದೆ. ಮೊಬೈಲ್ ಫೋನ್ ಗಳ ಆಯಸ್ಸಂತು ಇತ್ತೀಚೆಗೆ ಒಂದರಿಂದ ಹೆಚ್ಚೆಂದರೆ 2 ವರ್ಷಕ್ಕೆ ಇಳಿದು ಬಿಟ್ಟಿರುತ್ತದೆ. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಕನಿಷ್ಟವೆಂದರೂ ಮೂರ್ನಾಲ್ಕು ಪೋನ್ ಗಳನ್ನು ಬಳಸಿರುತ್ತಾನೆ. ಇದರಿಂದ ಇ-ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇ-ತ್ಯಾಜ್ಯ ಎನ್ನುವುದು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಒಂದು ಗಂಭೀರ ಸಮಸ್ಯೆ. ಹೀಗಾಗಿ ಮೊಬೈಲ್ ಫೋನ್ ರೀಸೈಕ್ಲಿಂಗ್ ಮಾಡುವ ಯೋಚನೆ ಹೊಳೆಯಿತು. ಇದಲ್ಲದೆ ನಾನು ಸದ್ಯದಲ್ಲೇ ದೊಡ್ಡ ಮಟ್ಟದಲ್ಲಿ ಮೊಬೈಲ್ ಸರ್ವಿಸ್ ಆಂಡ್ ರಿಪೇರ್ ಸೆಂಟರ್ ಆರಂಭಿಸಲು ನಿರ್ಧರಿಸಿದ್ದೇನೆ. ಇಲ್ಲಿ ಹಳೆಯ, ಸ್ಕ್ರಾಪ್ ಮೊಬೈಲ್ ಗಳ ಬಿಡಿಭಾಗಗಳನ್ನು ಬಳಸಿಕೊಳ್ಳ ಬಹುದು ಎನ್ನುವ ಯೋಚನೆ ನನ್ನದು.
ಜಿಲ್ಲಾ ಮಟ್ಟದ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಬಹುದೆಂದು ನಿರೀಕ್ಷೆ ಮಾಡಿದ್ದೆ. ಆದರೆ ಇದೀಗ ಸ್ವರ್ಧೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ರಾಜ್ಯ ಮಾತ್ರವಲ್ಲದೇ ದೆಹಲಿ, ಮುಂಬೈ ನಿಂದಲೂ ಸ್ವರ್ಧೆಯಲ್ಲಿ ಭಾಗವಹಿಸಲು ವಿಚಾರಣೆ ಕರೆಗಳು ಬರುತ್ತಿದೆ. ಕನಿಷ್ಟ 500 ಮಂದಿಯಾದರೂ ಭಾಗವಹಿಸುವ ನಿರೀಕ್ಷೆ ಇದೆ. ಉಡುಪಿ ಮಾತ್ರವಲ್ಲದೆ ದ.ಕ, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ,ಹೊಸದುರ್ಗ, ಮಡಿಕೇರಿ ಹೀಗೆ ನಾನಾ ಜಿಲ್ಲೆಗಳಿಂದ ಕರೆ ಬರುತ್ತಿದೆ. ಸಖತ್ ರೆಸ್ಪಾನ್ಸ್ ಬರ್ತಾ ಇದೆ ಎನ್ನುತ್ತಾರೆ ಖುಷಿಯಿಂದ ರೂಪೇಶ್ ಕುಮಾರ್.