ಮಂಗಳೂರು,ಸೆ 30 (MSP): ಜೆಸಿಐ ಮಂಗಳೂರು, ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಮಂಗಳೂರು ಸಹಭಾಗಿತ್ವದ ಜೆಸಿಐ ಸಪ್ತಾಹದ ಅಂಗವಾಗಿ ಶ್ರೇಷ್ಟ ಯುವಜನ ಪ್ರಶಸ್ತಿಯನ್ನು ನಗರದ ಮಲ್ಲಿಕಟ್ಟೆಯ ಲಯನ್ಸ್ ಕ್ಲಬ್ ನಲ್ಲಿ ಸೆ.29 ರ ಶನಿವಾರ ಪ್ರಧಾನ ಮಾಡಲಾಯಿತು.
ದಯಾನಂದ ಕುಕ್ಕಾಜೆ (ಪತ್ರಕರ್ತ), ಭವನ ಪಿ.ಜಿ. (ಚಿತ್ರಕಲೆ), ಪ್ರವೀಣ್ ಉಡುಪ (ವಿಜ್ಞಾನ ಮತ್ತು ತಂತ್ರಜ್ಞಾನ), ಶಬರಿನಾಥನ್ (ಉದ್ಯಮ), ಪೂವಮ್ಮ (ಕ್ರೀಡೆ), ತೌಸೀಫ್ ಅಹ್ಮದ್ (ಅನಿಮಲ್ ಕೇರ್), ಪ್ರವೀಣ್ ಕಲಾಮದ್ನಿ (ಶೈಕ್ಷಣಿಕ) ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಡಾ. ರಾಹುಲ್.ಜಿ ಅವರಿಗೆ ಕಮಲಪತ್ರ ಪ್ರಶಸ್ತಿ, ವಿಶೇಷ ಸಾಧಕರಾಗಿ ಆಶ್ಲೇ ಡಿಸೋಜಾ, ತೆರೆಮರೆಯಲ್ಲಿ ಸಮಾಜಕ್ಕಾಗಿ ದುಡಿಯುವ ಯೋಗೀಶ್ ನಾಯಕ್ ಅವರನ್ನು ಇದೇ ಸಂದರ್ಭ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜೆಸಿಐ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಅಧ್ಯಕ್ಷ ಸದಾನಂದ ನಾವಡ, "ಜೆಸಿಐ 50 ವರ್ಷಗಳನ್ನು ಪೂರ್ಣಗೊಳಿಸಿದ್ದು, ಹಿಂದಿನಿಂದಲೂ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ ಎಂದರು.
ಫಸ್ಟ್ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ರೊನಾಲ್ಡ್ ಗೋಮ್ಸ್ ಮಾತನಾಡಿ , "ಯುವ ಸಾಧಕರಿಗೆ ನೀಡಿದ ಈ ಪ್ರಶಸ್ತಿಯಿಂದ ಯುವಕರನ್ನು ಮತ್ತಷ್ಟು ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹಿಸುತ್ತದೆ ಎಂದರು.ಕಾರ್ಯಕ್ರಮದಲ್ಲಿ ಜೆಸಿಐ ಮಂಗಳೂರಿನ ಅಧ್ಯಕ್ಷ ಶೈಲಾಜಾ ಎ ರಾವ್ ಸ್ವಾಗತಿಸಿದರು. ಜೆಸಿಐ ಮಂಗಳೂರು ಕಾರ್ಯದರ್ಶಿ ಶ್ವೇತಾ ಜೈನ್ ಅವರು ಧನ್ಯವಾದಗಳನ್ನು ವ್ಯಕ್ತಪಡಿಸಿದರು.ಇದೇ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ವಿಜಯ ವಿಷ್ಣು ಮಾಯ್ಯ, ಜೆಸಿಐ ಮಂಗಳೂರು ಖಜಾಂಚಿ ಮನಿಷಾ ಮತ್ತು ಸಂಚಾಲಕ ಅಕ್ಷತಾ ಕಾಮತ್ ಉಪಸ್ಥಿತರಿದ್ದರು.