ಮಂಗಳೂರು, ಸೆ 30(SM): ನಗರ ಹೊರವಲಯದ ವಳಚ್ಚಿಲ್ನ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಬೆಂಗಳೂರಿನ ಕೊರಮಂಗಲದ ನಿಜಲಿಂಗಪ್ಪ ಎಂಬವರ ಪುತ್ರ ಶರತ್ಬಾಬು(20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಶನ್ ವಿಭಾಗದಲ್ಲಿ ಶರತ್ ಬಾಬು ಓದುತ್ತಿದ್ದ. ವಳಚ್ಚಿಲ್ ಮೇರ್ಲಪದವಿನ ಪಿಜಿಯೊಂದರ ಮೂರನೇ ಮಹಡಿಯ ಕೋಣೆಯಲ್ಲಿ ಆತ ತಂಗುತ್ತಿದ್ದ. ಆದರೆ ಶನಿವಾರ ತಡರಾತ್ರಿ ತನ್ನ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕೆ ವ್ಯಕ್ತವಾಗಿದೆ. ಘಟನೆ ಬಗ್ಗೆ ಮೃತ ವಿದ್ಯಾರ್ಥಿಯ ಪೋಷಕರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.