ಕುಂದಾಪುರ, ಸೆ 30(SM): ವಿವಾಹಿತರಾಗಿರುವ ಪ್ರೇಮಿಗಳಿಬ್ಬರು ಕುಂದಾಪುರದ ಲಾಡ್ಜೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಶೃಂಗೇರಿಯ ಕಳಸಪ್ಪ ಗೌಡ ಎಂಬಾತನ ಮಗ ಗುರುಮೂರ್ತಿ(43) ಹಾಗೂ ಕೊಪ್ಪದ ಜಯಪುರ ಎಂಬಲ್ಲಿಯ ನಿವಾಸಿ ಶೃಂಗೇರಿಗೆ ವಿವಾಹ ಮಾಡಿಕೊಟ್ಟಿರುವ ಗೋವಿಂದ ಎಂಬಾತನ ಪುತ್ರಿ ಶಾರದಾ(30) ಎಂದು ಗುರುತಿಸಲಾಗಿದೆ.
ಗುರುಮೂರ್ತಿ ವಿವಾಹಿತನಾಗಿದ್ದು ಆತನಿಗೆ ಇಬ್ಬರು ಮಕ್ಕಳಿದ್ದಾರೆ.ಹಾಗೂ ಶಾರದಾಳಿಗೂ ಎಂಟು ವರ್ಷದ ಓರ್ವ ಪುತ್ರಿಯಿದ್ದಾಳೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಸೆಪ್ಟಂಬರ್ ೨೬ರಂದು ಬೆಳಿಗ್ಗೆ ಕುಂದಾಪುರದ ಹೋಟೆಲ್ ಹರಿಪ್ರಸಾದ್ಗೆ ಬಂದಿದ್ದರು. ತಮ್ಮನ್ನು ಗಂಡ ಹೆಂಡತಿ ಎಂದು ಪರಿಚಯಿಸಿ ಗುರುಮೂರ್ತಿಯ ಚುನಾವಣಾ ಗುರುತಿನ ಚೀಟಿ ನೀಡಿ ಕೊಠಡಿ ಸಂಖ್ಯೆ 103ರಲ್ಲಿ ಉಳಿದುಕೊಂಡಿದ್ದರು. ಭಾನುವಾರ ಬೆಳಿಗ್ಗೆ ರೂಂ ಬಾಯ್ ಬಂದು ನೋಡಿದಾಗ ಬಾಗಿಲು ತೆರೆಯದೇ ಇದ್ದುದನ್ನು ಗಮನಿಸಿ ಕಿಟಕಿಯಲ್ಲಿ ನೋಡಿದಾಗ ಅನುಮಾನಾಸ್ಪದವಾಗಿ ಬಿದ್ದುಕೊಂಡಿರುವುದು ಕಂಡುಬಂದಿತ್ತೆನ್ನಲಾಗಿದೆ.
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಚುನಾವಣಾ ಗುರುತಿನ ಚೀಟಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಸೆಪ್ಟಂಬರ್ ೨೭ರಂದು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಶಾರದಾ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದ್ದು, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ಕುಂದಾಪುರ ಪೊಲೀಸರಿಗೆ ಮಾಹಿತಿ ದೊರಕಿದೆ. ನಂತರ ಎರಡೂ ಮನೆಯವರಿಗೆ ಮಾಹಿತಿ ನೀಡಿದ ಬಳಿಕ ಭಾನುವಾರ ಸಂಜೆ ರೂಮಿನ ಬಾಗಿಲು ತೆರೆದು ಪರಿಶೀಲಿಸಲಾಯಿತು.
ಈ ಸಂದರ್ಭ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೊಠಡಿಯೊಳಗೆ ಹಲವಾರು ಖಾಲಿಯಾದ ಮದ್ಯದ ಬಾಟಲಿಗಳಿದ್ದು, ಗ್ಲಾಸಿನಲ್ಲಿ ವಿಷ ಬೆರಸಿದ ವಾಸನೆ ಬರುತ್ತಿತ್ತು ಎಂದು ತನಿಖೆಯ ಸಂದರ್ಭ ತಿಳಿದು ಬಂದಿದೆ. ಸಂಬಂಧಿಕರ ಸಮ್ಮುಖದಲ್ಲಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಘಟನೆಯ ಕುರಿತಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.