ವಿಟ್ಲ, ಅ 1 (MSP): ಭಾಷಾ ವಿಚಾರಕ್ಕೆ ಸಂಬಂಧಿಸಿ ಬೈಕ್ಗಳಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಸೆಲೂನ್ ನುಗ್ಗಿ ದಾಂಧಲೆ ಗೈದು, ಯುವಕನೋರ್ವನಿಗೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮಾಣಿ ಸಮೀಪದ ನೇರಳಕಟ್ಟೆ ಎಂಬಲ್ಲಿ ಸೆ. 30 ರ ಭಾನುವಾರ ರಾತ್ರಿ ನಡೆದಿದೆ. ಉತ್ತರ ಭಾರತದದ ದಿಲ್ಲಿಯ ನಿವಾಸಿ ಮುಸೈದ್ (30) ಹಲ್ಲೆಗೊಳಗಾದ ವ್ಯಕ್ತಿ ಎಂದು ತಿಳಿದು ಬಂದಿದೆ.
ಮಾಣಿ ಸಮೀಪದ ನೇರಳಕಟ್ಟೆಯ ಗಣೇಶ್ ಕಾಂಪ್ಲೆಸ್ನ ಖಾಸಗಿ ಕಟ್ಟಡವೊಂದರಲ್ಲಿ ಕಾರ್ಯಚರಿಸುತ್ತಿರುವ ಇಲ್ಲಿನ ನಿವಾಸಿ ನಾಸಿರ್ ಎಂಬವರಿಗೆ ಸೇರಿದ ಸೆಲೂನ್ನಲ್ಲಿ ದಿಲ್ಲಿಯ ನಿವಾಸಿ ಮುಸೈದ್ ಎಂಬವರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇಂದು ರಾತ್ರಿ ಎರಡು ಬೈಕ್ಗಳಲ್ಲಿ ಬಂದ ಆರು ಮಂದಿಯ ದುಷ್ಕರ್ಮಿಗಳ ತಂಡವು, ಇಲ್ಲಿನ ಸೆಲೂನ್ಗೆ ನುಗ್ಗಿ ದಾಂಧಲೆ ನಡೆಸಿದೆ. ತದನಂತರ ಸೆಲೂನ್ನಲ್ಲಿ ಕೆಲಸ ಮಾಡುತ್ತಿದ್ದ ಮುಸೈದ್ ಎಂಬವರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಿದೆ ಎಂದು ತಿಳಿದುಬಂದಿದೆ.
ಮಾಣಿ ಮೂಲದ ಇಬ್ಬರು ಹಾಗೂ ಉಳಿದ ನಾಲ್ಕು ಮಂದಿ ಕಲ್ಲಡ್ಕದ ನಿವಾಸಿಗಳು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಭಾಷಾ ವಿಚಾರವಾಗಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ವಿಟ್ಲ, ಬಂಟ್ವಾಳ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ಬಗೆಗಿನ ಖಚಿತ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ.