ಮಂಗಳೂರು, ಅ 1 (MSP): ಬುದ್ದಿವಂತರ ಜಿಲ್ಲೆ, ರ್ಯಾಂಕ್ ಪಡೆಯುವವರ ಜಿಲ್ಲೆ ಎಂಬ ಖ್ಯಾತಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಯಿಂದ ಜಿಲ್ಲೆಗೆ ಕಪ್ಪು ಚುಕ್ಕಿಯಿಟ್ಟಂತಾಗಿದೆ. ಹೆಚ್ಚಿನ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣದಲ್ಲಿ ಹಾಸ್ಟೆಲ್ ವಾರ್ಡನ್ ಗಳ ವಿರುದ್ದವೇ ಆರೋಪಗಳು ಕೇಳಿ ಬರುತ್ತಿದ್ದು, ವಿದ್ಯಾರ್ಥಿಗಳಲ್ಲಿರುವ ಮಾನಸಿಕ ತೊಳಲಾಟ, ಖಿನ್ನತೆ, ವಿಫಲತೆಗಳನ್ನು ವಸತಿನಿಲಯದ ಪಾಲಕರು ಅರ್ಥಮಾಡಿಕೊಳ್ಳುವಲ್ಲಿ ಎಡವುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಸದುದ್ದೇಶದಿಂದ ಹಾಸ್ಟೆಲ್ ಮ್ಯಾನೇಜ್ ಮೆಂಟ್ ಕೋರ್ಸ್ ಮೂಲಕ ವಾರ್ಡನ್ ಗಳಾಗು ಇಚ್ಚಿಸುವವರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಲು ಮಂಗಳೂರಿನ ವಿಕಾಸ್ ಶಿಕ್ಷಣ ಸಂಸ್ಥೆ ಮುಂದಾಗಿದೆ.
ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಜಿಲ್ಲೆಗೆ ರಾಜ್ಯಕ್ಕೆ ಮಾತ್ರ ಸೀಮಿತವಾಗದೇ ದೇಶದ ಹಲವೆಡೆಗಳಲ್ಲಿ ಇಂಥಹ ಘಟನೆಗಳು ವರದಿಯಾಗುತ್ತಿದೆ. ಎಳೆಯ ಪ್ರಾಯದಲ್ಲೇ ಮಕ್ಕಳು ಪೋಷಕರ ಪಾಲನೆಯಿಂಧ ವಂಚಿತರಾಗುತ್ತಿರುವುದು, ಕಲಿಕೆಯ ಒತ್ತಡ ಮಾನಸಿಕೆ ಖಿನ್ನತೆ ಹಾಗೂ ಇತರ ಕಾರಣಗಳು ವಿದ್ಯಾರ್ಥಿಗಳನ್ನು ತಪ್ಪು ದಾರಿ ಹಿಡಿಯುವಂತೆ ಮಾಡುತ್ತದೆ. ಹೀಗಾಗಿ ಇದನ್ನು ಅರಿತ ವಿಕಾಸ್ ಕಾಲೇಜ್ ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಹಾಸ್ಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಆರಂಭಿಸಲು ಮುಂದಾಗಿದೆ. ಈ ಬಗ್ಗೆ ಸಂಸ್ಥೆಯ ಅಧ್ಯಕ್ಷರಾದ ಮಾಜಿ ಸಚಿವ ಕೃಷ್ಣ .ಜೆ.ಪಾಲೇಮಾರ್ ಹಾಸ್ಟೆಲ್ ಮ್ಯಾನೇಜ್ಮೆಂಟ್ ಡಿಪ್ಲೋಮಾ ಕೋರ್ಸ್ ಆರಂಭಿಸೋ ಬಗ್ಗೆ ಅ.೦೧ ರಂದು ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದ್ಧಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಪೋಷಕರ ಸ್ಥಾನವನ್ನ ತುಂಬುವ ಜವಾಬ್ದಾರಿ ಹಾಸ್ಟೆಲ್ ವಾರ್ಡನ್ ಗಳದ್ಧಾಗಿದ್ದು, ಅವರಿಗೆ ಸೂಕ್ತ ಶಿಕ್ಷಣ ನೀಡುವ ಮೂಲಕ ಆತ್ಮಹತ್ಯೆಗಳನ್ನ ತಡೆಯುವ, ವಿದ್ಯಾರ್ಥಿಗಳನ್ನು ಹುರಿದಂಬಿಸುವ ಉದ್ದೇಶ ನಮ್ಮ ಸಂಸ್ಥೆಯದ್ದು ಎಂದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಂಸ್ಥೆಯ ಅನಂತ ಪ್ರಭು, ಟ್ರಸ್ಟಿ ಕೊರಗಪ್ಪ, ಮಂಜುಳಾ ರಾವ್ ಮುಂತಾದವರು ಉಪಸ್ಥಿತರಿದ್ದರು.