ಕಾರ್ಕಳ, ಮೇ 27 (DaijiworldNews/MS): ಜೂನ್ ತಿಂಗಳಿನ ಮಳೆಗಾಲ ಆರಂಭವಾಗುವ ಮೊದಲೇ ಪುರಸಭಾ ವ್ಯಾಪ್ತಿಯಲ್ಲಿ ಚರಂಡಿ ಹೂಳೆತ್ತುವ ಕಾಮಗಾರಿ ಭರದಿಂದ ಸಾಗುತ್ತಿದೆ.
ಸುಮಾರು 18ಲಕ್ಷದ 50 ಸಾವಿರ ರೂ. ವೆಚ್ಚದಲ್ಲಿ ಹೂಳು ತೆಗೆಯುವ ಕಾರ್ಯ ನಡೆಯುತ್ತದೆ. 23 ವಾರ್ಡ್ಗಳಲ್ಲಿ 4 ಪ್ಯಾಕೆಜ್ಗಳ ಮೂಲಕ ಚರಂಡಿ ಹೂಳೆತ್ತಲಾಗುತ್ತಿದೆ. 1 ರಿಂದ 6 ವಾರ್ಡ್ಗೆ 4.80 ಲಕ್ಷ ರೂ. 7ರಿಂದ 12 ವಾರ್ಡ್ಗೆ 4.80 ಲಕ್ಷ ರೂ. 13ರಿಂದ18ವಾರ್ಡ್ಗೆ 4.90 ಲಕ್ಷ ರೂ. 19ರಿಂದ 23 ವಾರ್ಡ್ಗೆ 4 ಲಕ್ಷ ರೂ ಹೀಗೆ ತೀವ್ರ ಸಮಸ್ಯೆಗಳಿರುವ ವಾರ್ಡ್ಗಳನ್ನು ಆದ್ಯತೆಯಾಗಿರಿಸಿಕೊಂಡು ಅನುದಾನ ವಿಂಗಡಿಸಿ ಮೀಸಲಿಡಲಾಗಿದೆ. ಒಂದೊಂದೆ ವಾರ್ಡ್ಗಳಲ್ಲಿ ಕಾಮಗಾರಿ ನಡೆಸಿಕೊಂಡು ಪೂರ್ಣಗೊಳಿಸಲಾಗುತ್ತಿದೆ. ಮಾನವ ಸಂಪನ್ಮೂಲದ ಜತೆಗೆ ಜೆಸಿಬಿಗಳನ್ನು ಬಳಸಿಕೊಂಡು ಕಾಮಗಾರಿ ನಡೆಯುತ್ತಿದೆ. ಪೂರ್ಣ ಪ್ರಮಾಣದಲ್ಲಿ ಮಳೆ ಶುರುವಾಗುವುದರೊಳಗೆ ಎಲ್ಲ ವಾರ್ಡ್ಗಳ ಚರಂಡಿ ಹೂಳೆತ್ತುವ ಕೆಲಸ ಮುಕ್ತಾಯ ಕಾಣಲಿದೆ. ಪುರಸಭೆ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಅಧಿಕಾರಿಗಳ ಸಹಕಾರ, ವಾರ್ಡ್ ಸದಸ್ಯರ ಮೇಲುಸ್ತುವಾರಿಯಲ್ಲಿ ಸ್ಥಳಿಯರ ಸಲಹೆ ಸೂಚನೆ ಪಡೆದು ಚರಂಡಿಗಳ ಹುಲ್ಲು ಕತ್ತರಿಸಿ ಹೂಳು ತೆಗೆಯುವ ಕೆಲಸ ನಡೆಯುತ್ತಿದೆ.
ವರ್ಷದಿಂದ ವರ್ಷಕ್ಕೆ ನಗರದಲ್ಲಿ ಚರಂಡಿಗಳ ಗಾತ್ರ ಕುಗ್ಗಿ ಚರಂಡಿಗಳು ಹೂಳಿನಿಂದ ಮುಚ್ಚಿವೆ. ಚರಂಡಿಯಲ್ಲಿ ಹೂಳು, ಹುಲ್ಲು ತುಂಬಿಕೊಂಡಿರುವುದರಿಂದ ಮಳೆಗಾಲ ಜೋರಾಗಿ ಮಳೆ ಸುರಿದಾಗ ಅನೇಕ ಕಡೆಗಳಲ್ಲಿ ಕೃತಕ ನೆರೆ ಉಂಟಾಗುತ್ತದೆ. ಈ ಬಾರಿ ಚಂಡಮಾರುತ ಪರಿಣಾಮವೂ ಸೇರಿ ಬಹುತೇಕ ಸಮಯಗಳಲ್ಲಿ ಮಳೆಯಾಗಿತ್ತು. ಅನಂತರದಲ್ಲಿ ಮಳೆಗಾಲಸ ಸಿದ್ದತೆ ಕುರಿತು ಇಲಾಖೆಗಳ ಸಭೆ ಕರೆಯುವ ಕುರಿತು ತಹಶೀಲ್ದಾರ್ ಭರವಸೆ ನೀಡಿದಲ್ಲದೆ ಅನಂತರದಲ್ಲಿ ಸಭೆಯೂ ನಡೆಸಲಾಗಿತ್ತು. ಅಷ್ಟರಲ್ಲೆ ಪುರಸಭೆಗೆ ಹೊಸದಾಗಿ ಮುಖ್ಯಾಧಿಕಾರಿಗಳು ಅಧಿಕಾರ ವಹಿಸಿಕೊಂಡು ನಗರದ ಹೂಳೆತ್ತುವ ಕಾರ್ಯಕ್ಕೆ ಸಂಬಂದಿಸಿ ಪ್ರಕ್ರಿಯೆ ಆರಂಭಿಸಿದ್ದರು.
"ವಾರ್ಡ್ಗಳ ಚರಂಡಿ ಹೂಳೆತ್ತುವ ಕಾರ್ಯ ಹಂತಹಂತವಾಗಿ ನಡೆಯಲಿದ್ದು, ಟೆಂಡರ್ ಪ್ರಕ್ರಿಯೆ ನಡೆದು ಕೆಲಸ ಆರಂಭವಾಗಿದೆ " -ರೂಪಾ ಶೆಟ್ಟಿ ಮುಖ್ಯಾಧಿಕಾರಿ ಪುರಸಭೆ ಕಾರ್ಕಳ