ಮಂಗಳೂರು, ಅ 1 (MSP): ಜಿಲ್ಲೆಯ ರೈತರು ಬೆಳೆ ಸಮೀಕ್ಷೆಗಾಗಿ ಬರುವ ಸರ್ಕಾರಿ ಸಿಬ್ಬಂದಿ ಅಥವಾ ಖಾಸಗಿ ನಿವಾಸಿಗಳಿಗೆ ಬೆಳೆಗಳ ಮಾಹಿತಿ ಹಾಗೂ ವಿಸ್ತೀರ್ಣವನ್ನು ನೀಡುವುದರಿಂದ 2018ರ ಮುಂಗಾರು ಬೆಳೆ ಸಮೀಕ್ಷೆ ಯಶಸ್ವಿಯಾಗಲಿದೆ ಎಂದು ಜಿಲ್ಲಾಧಿಕಾರಿ ಎಸ್ ಸಸಿಕಾಂತ್ ಸೆಂಥಿಲ್ ಹೇಳಿದರು.
ಅವರಿಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳೆ ಸಮೀಕ್ಷೆ ಸಂಬಂಧ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ರೈತರ ಅನುಕೂಲಕ್ಕಾಗಿ ರೂಪಿಸಿರುವ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆಗೆ ಪೂರಕವಾಗಿ ಸ್ಪಂದಿಸಿ ಎಂದು ಜಿಲ್ಲೆಯ ರೈತರನ್ನು ವಿನಂತಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 422 ಗ್ರಾಮಗಳಿದ್ದು, ಒಟ್ಟು 1250 ಖಾಸಗಿ ನಿವಾಸಿಗಳನ್ನು ನೇಮಕ ಮಾಡಿ ಅವರ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಪ್ರತೀ ಪ್ಲಾಟ್ಗೆ ರೂ. 10ರಂತೆ ಸಂಭಾವನೆಯನ್ನು ಖಾಸಗಿ ನಿವಾಸಿಗಳಿಗೆ ನೀಡಲಾಗುತ್ತದೆ ಎಂದರು.
ಇದರಿಂದಾಗಿ ಬೆಳೆಗಳ ಹಾಗೂ ವಿಸ್ತೀರ್ಣದ ಮಾಹಿತಿ ಜೊತೆಗೆ ಬೆಳೆ ನಷ್ಟವಾದಾಗ ಅಂದಾಜಿಸಲು ಹಾಗೂ ಪರಿಹಾರ ನೀಡಲು ಸುಲಭ ಸಾಧ್ಯ. ಉತ್ಪಾದನೆಯ ಬಗ್ಗೆ ನಿಖರ ಮಾಹಿತಿ ಪಡೆಯಲು ಸಾಧ್ಯ ಹಳ್ಳಿಗಳಿಗೆ ಭೇಟಿ ನೀಡುವ ಮೊದಲು ಸಂಬಂಧಪಟ್ಟವರಿಗೆ ಮಾಹಿತಿ ನೀಡಲಿದ್ದು, ತಾವು ಅವರ ಜೊತೆಯಲ್ಲಿದ್ದು ಸಮರ್ಪಕ ಮಾಹಿತಿ ನೀಡಿರಿ ಎಂದು ರೈತರಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಅಪರ ಜಿಲ್ಲಾಧಿಕಾರಿ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.