ಕಾಸರಗೋಡು, ಅ 1(SM): ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ೧.೨೦ ಕೋಟಿ ರೂ. ಹವಾಲ ಹಣ ಮತ್ತು ಒಂದೂವರೆ ಕಿಲೋ ಚಿನ್ನಾಭರಣವನ್ನು ವಶಪಡಿಸಿಕೊಂಡಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರನ್ನು ಕಾರು ಚಾಲಕ ತಳಂಗರೆಯ ಬಶೀರ್(60) ಮತ್ತು ಮಹಾರಾಷ್ಟ್ರ ಸಾಂಗ್ಲಿಯ ರಾಮಚಂದ್ರ ಪಾಟೀಲ್(27) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯಂತೆ ಕಾಸರಗೋಡು ಮತ್ತು ಕಣ್ಣೂರು ಆದಾಯ ತೆರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಮಂಗಳೂರಿನಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಕಾರನ್ನು ಉಪ್ಪಳದ ಬಳಿ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಸುಮಾರು ೧.೨೦ ಕೋಟಿ ರೂಪಾಯಿ ಪತ್ತೆಯಾಗಿದೆ. ಕಾರು ಚಾಲಕ ಬಶೀರ್ ನನ್ನು ವಿಚಾರಿಸಿದಾಗ ಲಭಿಸಿದ ಮಾಹಿತಿಯಂತೆ ಕಾಸರಗೋಡು ಕೋಟೆ ರಸ್ತೆಯ ಬಾಡಿಗೆ ಮನೆಯೊಂದಕ್ಕೆ ದಾಳಿ ನಡೆಸಿದ್ದು, ಇಲ್ಲಿಂದ ಸುಮಾರು ಒಂದೂವರೆ ಕಿಲೋ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಮನೆಯಲ್ಲಿದ್ದ ರಾಮಚಂದ್ರ ಪಾಟೀಲ್ ನನ್ನು ಬಂಧಿಸಲಾಗಿದೆ. ಕಾರಿನಲ್ಲಿ ಹಣವನ್ನು ಸೀಟಿನೊಳಗೆ ರಂಧ್ರ ತೆಗೆದು ಯಾರಿಗೂ ಸಂಶಯ ಬಾರದಂತೆ ಬಚ್ಚಿಡಲಾಗಿತ್ತು. ಮೂರು ದಿನಗಳ ಹಿಂದೆಯೇ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ಲಭಿಸಿದ್ದು. ಇದರಿಂದ ಕಾರಿಗಾಗಿ ಪೊಲೀಸರು ನಿಗಾ ಇರಿಸಿದ್ದರು.
ಮಂಗಳೂರಿನಲ್ಲಿರುವ ಮಹಾರಾಷ್ಟ್ರ ನಿವಾಸಿಯಾದ ರವಿ ಎಂಬಾತ ಕಾರನ್ನು ಕಾಸರಗೋಡಿಗೆ ತಲಪಿಸಲು ತಿಳಿಸಿದ್ದಾಗಿ ಬಷೀರ್ ತನಿಖೆ ವೇಳೆ ಮಾಹಿತಿ ನೀಡಿದ್ದಾರೆ. ಕಾರಿನಲ್ಲಿ ಹಣ ಇರುವುದು ತನಗೆ ಅರಿವಿರಲಿಲ್ಲ ಎಂದು ಬಷೀರ್ ಅಧಿಕಾರಿಗಳಿಗೆ ತಿಳಿಸಿದ್ದಾನೆ.
ಮುಂಬೈ ಕೇಂದ್ರೀಕರಿಸಿರುವ ಜಾಲವು ಈ ದಂಧೆಯ ಹಿಂದೆ ಇರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ. ಇದರಿಂದ ತನಿಖೆಯನ್ನು ಮುಂಬೈ ಗೆ ವಿಸ್ತರಿಸಿದೆ. ಹಣವನ್ನು ರವಾನಿಸಿದ ವ್ಯಕ್ತಿಯ ಪತ್ತೆಯಾದಲ್ಲಿ ಹೆಚ್ಚಿನ ಮಾಹಿತಿ ಲಭಿಸ ಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಣ ಕಳುಹಿಸಿಕೊಟ್ಟ ರವಿ ಎಂಬಾತ ಮುಂಬೈ ಗೆ ಪರಾರಿಯಾಗಿರುವುದಾಗಿ ಸಂಶಯಿಸಲಾಗಿದೆ. ಆದಾಯ ತೆರಿಗೆ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.