ಪುತ್ತೂರು, ಅ 7: ದಕ್ಷಿಣ ಕನ್ನಡ ಮರಳುಗಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆ. ಕರಾವಳಿಯ ಪ್ರಮುಖ ಜೀವ ನದಿಗಳಾದ ನೇತ್ರಾವತಿ ಮತ್ತು ಕುಮಾರಾಧಾರ ನದಿಯ ದಡಗಳಲ್ಲಿ ಅಕ್ರಮ ಮರಳುಗಾರಿಗೆ ಸಲೀಸಾಗಿ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿಯುವ ಎರಡು ಪ್ರಮುಖ ನದಿಗಳಾದ ನೇತ್ರಾವತಿ ಹಾಗೂ ಕುಮಾರಾಧಾರ ನದಿ ತಟದಲ್ಲಿ ನಿರಂತರವಾಗಿ ನಡೆಯುತ್ತಿರುವ ಮರಳುಗಾರಿಕೆ ಪುತ್ತೂರು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ನದಿಯಲ್ಲಿ ಅಪಾರ ಪ್ರಮಾಣದಲ್ಲಿ ಮರಳು ಇದ್ದರೂ ಪುತ್ತೂರಿನ ಜನರಿಗೆ ಮರಳು ಲಭ್ಯವಾಗುತ್ತಿಲ್ಲ.
ಪುತ್ತೂರಿನ ಭಾಗದಲ್ಲಿ ಸುಮಾರು 6 -7 ಸಾವಿರಕ್ಕೆ ಸಿಗುತ್ತಿದ್ದ ಮರಳೀಗ 25 ಸಾವಿರದ ಗಡಿ ದಾಟಿದೆ. ಮರಳುಗಾರಿಕೆಯಲ್ಲಿ ತೊಡಗುತ್ತಿದ್ದ ಜನರೀಗ ಮರಳು ಹಗರಣದಲ್ಲಿ ಭಾಗಿಯಾಗುತ್ತಿದ್ದಾರೆ. ಪ್ರಮುಖ ಜೀವ ನದಿಗಳಾದ ನೇತ್ರಾವತಿ ಮತ್ತು ಕುಮಾರಾಧಾರ ನದಿಗಳಿಂದ ತೆಗೆದ ಮರಳನ್ನು ದಂಧೆಕೋರರು ಹೊರ ರಾಜ್ಯಗಳಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ. ಹೊರ ರಾಜ್ಯಗಳಲ್ಲಿ ಮರಳಿಗೆ ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಮರಳು ದಂಧೆಕೋರರ ಆದಾಯವೂ ದ್ವಿಗುಣಗೊಂಡಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಇವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ.
ನೇತ್ರಾವತಿ ಮತ್ತು ಕುಮಾರಾಧಾರ ನದಿಗಳಿಂದ ತೆಗೆದ ಮರಳನ್ನು ವ್ಯವಸ್ಥಿತವಾಗಿ ರಾತ್ರೋರಾತ್ರಿ ಹೊರ ಜಿಲ್ಲೆಗಳಿಗೆ ಸಾಗಿಸಲಾಗುತ್ತಿದೆ. ಬೇರೆ ಜಿಲ್ಲೆಯಲ್ಲಿ ಮರಳಿಗೆ ಸಿಗುವಷ್ಟು ಬೆಲೆ ನಮ್ಮ ಜಿಲ್ಲೆಯಲ್ಲಿ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಈ ದಂಧೆ ಆರಂಭಗೊಂಡಿದೆ. ಅಕ್ರಮ ಮರಳುಗಾರಿಕೆಯಿಂದ ರೋಸಿ ಹೋಗಿರುವ ಜನರು ಈ ಬಗ್ಗೆ ಮನವಿ ಮಾಡುತ್ತಿದ್ದರೂ ಸಮಸ್ಯೆ ಈ ಭಾಗದಲ್ಲಿ ಗಂಭೀರ ರೂಪ ತಾಳುತ್ತಿದೆ.