ನವದೆಹಲಿ, ಅ 2(SM): ದೇಶದ ಸರಕಾರಿ ಸ್ವಾಮ್ಯದ, ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಇದೀಗ ಗ್ರಾಹಕರಿಗೆ ಶಾಕ್ ನೀಡಲು ಮುಂದಾಗಿದೆ. ವ್ಯವಹಾರದಲ್ಲಿ ಮತ್ತೊಂದು ಬದಲಾವಣೆ ತರುವ ಮೂಲಕ, ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ. ಮೈಸೂರು ಬ್ಯಾಂಕ್ ಸೇರಿದಂತೆ ಆರು ಸಹವರ್ತಿ ಬ್ಯಾಂಕುಗಳು ವಿಲೀನವಾದ ನಂತರ, ಎಸ್ ಬಿಐ ಒಂದೊಂದಾಗಿಯೇ ಬದಲಾವಣೆಗಳನ್ನು ಜಾರಿಗೊಳಿಸುತ್ತಿದೆ.
ಗ್ರಾಹಕರಿಗೆ ತೊಂದರೆಯಾಗುವ ಮತ್ತೊಂದು ಬದಲಾವಣೆಯನ್ನು ಸ್ಟೇಟ್ ಬ್ಯಾಂಕ್ ತಂದಿದ್ದು, ಎಟಿಎಂ ಮೂಲಕ ಹಣ ವಿತ್ ಡ್ರಾ ಮಾಡುವ ಮಿತಿಯನ್ನು ಕಡಿತಗೊಳಿಸಿದೆ. ಈ ಹಿಂದೆ ಇದ್ದಂತಹ ನಲವತ್ತು ಸಾವಿರದ ಮಿತಿಯನ್ನು ಇಪ್ಪತ್ತು ಸಾವಿರಕ್ಕೆ ಇಳಿಸಿದೆ. ಈ ಹೊಸ ನಿಯಮ ಅಕ್ಟೋಬರ್ 31ರಿಂದ ಅನ್ವಯವಾಗಲಿದೆ.
ಸ್ಟೇಟ್ ಬ್ಯಾಂಕ್ ಮೂಲಗಳ ಪ್ರಕಾರ, ಡಿಜಿಟಲ್ ವ್ಯವಹಾರ ಹೆಚ್ಚಿಸುವ ಉದ್ದೇಶದಿಂದ ಈ ಬದಲಾವಣೆ ತರಲು ಬ್ಯಾಂಕ್ ಮುಂದಾಗಿದೆ. ಜೊತೆಗೆ, ಎಟಿಎಂನಲ್ಲಿ ವಂಚನೆ ಮತ್ತು ಮೋಸದ ವ್ಯವಹಾರಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಎಟಿಎಂ ಮಿತಿಯನ್ನು ಕಡಿತಗೊಳಿಸಲು ಬ್ಯಾಂಕ್ ನಿರ್ಧರಿಸಿದೆ ಎನ್ನಲಾಗಿದೆ.
ಎಟಿಎಂನಲ್ಲಿ ವಂಚನೆ ಪ್ರಕರಣದ ದೂರುಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಕ್ಲಾಸಿಕ್ ಮತ್ತು ಮೆಸ್ಟ್ರೋದಲ್ಲಿ ಬಿಡುಗಡೆ ಮಾಡಲಾಗಿದ್ದ ಡೆಬಿಟ್ ಕಾರ್ಡುಗಳ ನಗದು ಹಿಂಪಡೆಯುವಿಕೆಯ ಮಿತಿಯನ್ನು ಇಳಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.