ಮಂಗಳೂರು, ಅ 02(MSP): ಗಂಜಿಮಠದ ನಿವಾಸಿ ಮೊಹಮ್ಮದ್ ಸಮೀರ್ ಕೊಲೆ ಪ್ರಕರಣದಲ್ಲಿ ಆರೋಪಿಗಳು ಸಮೀರ್ ಕೊಲೆಗೆ ಬಳಸಿದ ಕಾರು ಮೂಡುಬಿದಿರೆಯಲ್ಲಿ ಪತ್ತೆಯಾಗಿದೆ. ಇದನ್ನು ತಮಿಳುನಾಡು ಪೊಲೀಸರು ವಶಪಡಿಸಿಕೊಂಡಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಸಮೀರ್ ಕೊಲೆ ಪ್ರಕರಣದ ತನಿಖೆಯನ್ನು ತಮಿಳುನಾಡಿನ ದೇವತಾನಪಟ್ಟಿ ಪೊಲೀಸರು ಕೈಗೆತ್ತಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಅಲ್ಲಿನ ಪೊಲೀಸರು ನಾಲ್ಕು ದಿನಗಳ ಹಿಂದೆ ಇಲ್ಲಿಗೆ ಆಗಮಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಗಂಜಿಮಠ ಹಾಗೂ ಸುತ್ತಲ ಸ್ಥಳಗಳಲ್ಲಿ ತನಿಖೆ ನಡೆಸಿದ್ದು ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಗಂಜಿಮಠ ಕಾಪು , ಕಡಂದಲೆ ಮೊದಲಾದ ಕಡೆಗಳಲ್ಲಿ ಕೆಲವರ ವಿಚಾರಣೆ ನಡೆಸಲಾಗಿದ್ದು, ಹಲವು ಮಹತ್ವದ ಸುಳಿವು ಸಂಗ್ರಹಿಸಿದ್ದಾರೆ.
ಸಮೀರ್ ಪತ್ನಿ ಫಿರ್ದೌಸ್ ಹಾಗೂ ಆಕೆಯ ಪ್ರಿಯಕರ ಕಾರ್ಕಳದ ಆಸೀಫ್ ಇವರಿಬ್ಬರು ಸಮೀರ್ ನನ್ನು ಕೊಲೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈ ಹಿನ್ನಲೆಯಲ್ಲಿ ತನಿಖೆ ತೀವ್ರಗೊಳಿಸಿದ್ದಾರೆ. ಸಮೀರ್ ಪತ್ನಿ ಫಿರ್ದೌಸ್ ಹಾಗೂ ಅವರ ಮೂರು ತಿಂಗಳಿನ ಪುತ್ರಿ ಬೆಂಗಳೂರಿಗೆ ತೆರಳಿದ ಬಳಿಕ ಮೊದಲೇ ಮಾಡಲಾದ ಪ್ಲಾನ್ ನಂತೆ ತಮಿಳುನಾಡಿನ ಕೊಡೈಕೇನಲ್ಲಿಗೆ ಹೋಗಿ ಅಲ್ಲಿ ಸಮೀರ್ ಹತ್ಯೆ ನಡೆಸಲಾಗಿದೆ. ನಂತರ ಮೃತದೇಹದ ಗುರುತು ಪತ್ತೆಯಾಗದಂತೆ ಮುಖಕ್ಕೆ ಆಸ್ಯಿಡ್ ಎರಚಿ, ದೇವತಾನಪಟ್ಟಿ ವ್ಯಾಪ್ತಿಯಲ್ಲಿರುವ ನಾಲೆಯೊಂದರಿಂದ ಮೇಲಿಂದ ಕೆಳಕ್ಕೆ ಎಸೆಯಲಾಗಿದೆ ಎನ್ನಲಾಗಿದೆ.
ಕೊಲೆ ನಡೆಸಿದ ಬಳಿಕ ಜೋಡಿಗಳು ಬೆಂಗಳೂರಿನಿಂದ ಇದೇ ಕಾರಿನಲ್ಲಿ ಊರಿಗೆ ಆಗಮಿಸಿರುವ ಸಾಧ್ಯತೆ ಹೆಚ್ಚಾಗಿದೆದೆ. ಕಾಪುವಿನ ತಂದೆ ಮನೆಯಲ್ಲಿ ಒಂದು ದಿನವಿದ್ದ ಫಿರ್ದೌಸ್, ಮರುದಿನ ಪರಾರಿಯಾಗಿದ್ದಳು. ಅತ್ತ ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಅಸಿಪ್ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಕೊಲೆ ನಡೆಸಿದ ಬಳಿಕ ಇವರಿಬ್ಬರು ವಿದೇಶಕ್ಕೆ ತೆರಳಿರುವ ಸಾಧ್ಯತೆ ಇದ್ದು, ತನಿಖೆ ಚುರುಕುಗೊಂಡಿದೆ. ಇದೇ ವೇಳೆ ಬಜ್ಪೆ ಪೊಲೀಸರು ತಮಿಳುನಾಡು ತಂಡದೊಂದಿಗೆ ತನಿಖೆಗೆ ಸಹಕರಿಸುತ್ತಿದ್ದಾರೆ.