ಉಪ್ಪಿನಂಗಡಿ, ಅ 02(MSP): ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ತೆರಳಿದ್ದ ವೃದ್ದ ಹಾಗೂ ಆತನ ಸಹಾಯಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು, ಸೊಸೆಯ ದೌರ್ಜನ್ಯದಿಂದ ಗೃಹಬಂಧನಕ್ಕೆ ಸಿಲುಕಿ ಪೊಲೀಸ್ ಕಾರ್ಯಾಚರಣೆ ಮೂಲಕ ರಕ್ಷಿಸಿದ ಘಟನೆ ಉಪ್ಪಿನಂಗಡಿ ನಟ್ಟಿಬೈಲ್ ಎಂಬಲ್ಲಿ ನಡೆದಿದೆ.
ನಟ್ಟಿಬೈಲ್ ನಿವಾಸಿಯಾದ ಸುಲೈಮಾನ್ (76) ಎಂಬವರಿಗೆ ಮಗ ಸೊಸೆಯೊಂದಿಗೆ ವೈಮನಸ್ಸು ಇತ್ತೆನ್ನಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಠಾಣೆಗೆ ಸೊಸೆ ವಿರುದ್ದ ದೂರು ಸಲ್ಲಿಸುವ ಉದ್ದೇಶದಿಂದ ಹಮೀದ್ ಎಂಬವರ ಸಹಕಾರದಿಂದ ಸೆ.30 ರ ಭಾನುವಾರ ಪೊಲೀಸ್ ಠಾಣೆಗೆ ತೆರಳಿದ್ದರು . ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ವಿದೇಶದಲ್ಲಿರುವ ಮಗ ಬರುವವರೆಗೆ ಹೊಂದಿಕೊಂಡು ದಿನ ಕಳೆಯಿರಿ. ಮಗ ಬಂದ ಬಳಿಕ ಸಮಸ್ಯೆಯನ್ನು ಬಗೆಹರಿಸೋಣವೆಂದು ಭರವಸೆ ನೀಡಿ ಕಳುಹಿಸಿದರು.
ನಂತರ ವೃದ್ದರಾದ ಸುಲೈಮಾನ್ ವಿನಂತಿ ಮೇರೆಗೆ ಹಮೀದ್ ಅವರನ್ನು ಮನೆಗೆ ಬಿಟ್ಟು ಬರಲು ಹೋಗಿ ಅವರ ಕೊಠಡಿಯಲ್ಲಿ ಕಷ್ಟ ಸುಖ ವಿಚಾರಿಸುತ್ತಿದ್ದರು. ಈ ಸಂದರ್ಭ ಸೊಸೆ ಕೊಠಡಿಯ ಹೊರಗೆ ಬಾಗಿಲಿಗೆ ಚಿಲಕ ಹಾಕಿ ದಿಗ್ಬಂಧನ ವಿಧಿಸಿದ್ದರು. ಇದರಿಂದ ವಿಚಲಿತರಾದ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಸಹಾಯ ಯಾಚಿಸಿದರು.
ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರಿಗೂ ಮನೆ ಮಂದಿ ಬಾಗಿಲು ತೆರೆಯಲು ಒಪ್ಪದೆ ಇದ್ದಾಗ, ನಮ್ಮ ಮನೆಯ ವಿಚಾರಕ್ಕೆ ಪೊಲೀಸರ ಮದ್ಯ ಪ್ರವೇಶದ ಅಗತ್ಯವಿಲ್ಲ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿ ಮನೆಯಂಗಳಕ್ಕೆ ಬಂದಿದ್ದ ಪೊಲೀಸರ ಬಗ್ಗೆ ವಿಡಿಯೋ ಚಿತ್ರೀಕರಣ ನಡೆಸುವ ಮೂಲಕ ಅವರನ್ನು ಬೆದರಿಸುವ ತಂತ್ರ ಪ್ರಯೋಗಿಸಿದ್ದರು. ನಂತರ ಸ್ಥಳಕ್ಕೆ ಬಂದ ಉಪ್ಪಿನಂಗಡಿ ಎಸ್ ಐ ನಂದ ಕುಮಾರ್ ಮನೆಯ ವಯೋವೃದ್ದರು ರಕ್ಷಣೆಗಾಗಿ ಪೊಲೀಸರಿಗೆ ಫೋನ್ ಮೂಲಕ ದೂರು ನೀಡಿದ ಹಿನ್ನಲೆಯಲ್ಲಿ ಆಗಮಿಸಿದ್ದೇವೆ. ಹಿರಿಯ ನಾಗರಿಕ ರಕ್ಷಣಾ ಕಾಯ್ದೆಯ ಅನುಸಾರ ಪೊಲೀಸ್ ಕಾರ್ಯಾಚರಣೆ ನಡೆಸುವ ಮುನ್ನ ಬಾಗಿಲು ತೆರವುಗೊಳಿಸಿ ಎಂದು ಆದೇಶಿಸಿದರು. ಬಳಿಕ ಮಹಿಳೆ ಬಾಗಿಲು ತೆರೆದು ಕೊಠಡಿಯೊಳಗಿದ್ದ ಸುಲೈಮಾನ್ ಹಾಗೂ ಹಮೀದ್ ಅವರನ್ನು ಬಂಧಮುಕ್ತಗೊಳಿಸಿದರು.
ಆಶ್ರಯ ಹಾಗೂ ಆಹಾರ ನೀಡಿ ಹೀರೋ ಆದ ಎಸ್ ಐ ನಂದಕುಮಾರ್
ಹಿರಿ ವಯಸ್ಸಿನ ಬಳಲಿಕೆಯ ಜೊತೆಗೆ ಈ ದಿಗ್ಬಂಧನ ದಿಂದ ಮಾನಸಿಕವಾಗಿ ಜರ್ಝರಿತವಾದ ಸುಲೈಮಾನ್ ಅವರಿಗೆ ಪೊಲೀಸ್ ಅಧಿಕಾರಿ ತಮ್ಮ ಮನೆಯಲ್ಲಿ ಆಹಾರದೊಂದಿಗೆ ಆಶ್ರಯ ನೀಡಿ ಸಾಂತ್ವನಗೊಳಿಸಿದರು, ಇತ್ತ ವೃದ್ದರ ಸಹಾಯಕ್ಕೆ ಅವರ ಮನೆಗೆ ಹೋಗಿ ದಿಗ್ಬಂಧನಕ್ಕೀಡಾದ ಹಮೀದ್ ಪೊಲೀಸ್ ಕಾರ್ಯಾಚರಣೆಯಿಂದ ರಕ್ಷಿಸಲ್ಪಟ್ಟಿದ್ದರು. ಇತ್ತ ವಿದೇಶದಲ್ಲಿ ಉದ್ಯೊಗದಲ್ಲಿರುವ ಅವರ ಪುತ್ರ ಊರಿಗೆ ಬರುವವರೆಗೆ ಯಾವುದೇ ಸಂಘರ್ಷವಿಲ್ಲದಂತೆ ಪರಸ್ಪರ ಹೊಂದಿಕೊಂಡು ಜೀವನ ನಡೆಸಬೇಕು ಎಂದು ಮನೆಮಂದಿಗೆ ಪೊಲೀಸ್ ಎಚ್ಚರಿಕೆ ನೀಡಿ ಸುಲೈಮಾನ್ ಅವರ ಇಚ್ಚೆಯಂತೆ ಮನೆಗೆ ಕಳುಹಿಸಿಕೊಟ್ಟಿದ್ದಾರೆ.