ನವದೆಹಲಿ, ಅ 02(MSP): ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೀತಿಗಳನ್ನು ವಿರೋಧಿಸಿ ಸೆ.23ರಂದು ಉತ್ತರಾಖಂಡದ ಪತಂಜಲಿಯಿಂದ ಆರಂಭಗೊಂಡಿರುವ ಕಿಸಾನ್ ಕ್ರಾಂತಿ ಪಾದಯಾತ್ರೆಯು ಅ.2 ರ ಇಂದು ದೆಹಲಿಯ ಕಿಸಾನ್ ಘಾಟ್ ತಲುಪಬೇಕಾಗಿದ್ದು, ಆದರೆ ಇಂದು ಯಾತ್ರೆಯನ್ನು ದೆಹಲಿ-ಉತ್ತರಪ್ರದೇಶ ಗಡಿಯತ್ತ ಸಾಗುತ್ತಿದ್ದ ವೇಳೆ ಭದ್ರತಾ ಪಡೆಗಳು ಹಾಗೂ ಪೊಲೀಸರು ಕಾನೂನು ಮತ್ತು ಶಾಂತಿಪಾಲನೆಯ ಕಾರಣಕ್ಕೆ ತಡೆಹಿಡಿದ್ದಾರೆ.
ಇದರಿಂದ ಆಕ್ರೋಶಗೊಂಡಿರುವ ರೈತರು ತೀವ್ರವಾಗಿ ಕಿಡಿಕಾರಿದ್ದು, ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗದಿದ್ದರೆ, ನಾವು ಇನ್ಯಾರ ಬಳಿ ನೆರವು ಕೇಳಬೇಕು? ಪಾಕಿಸ್ತಾನ ಅಥವಾ ಬಾಂಗ್ಲಾದೇಶಗಳ ಸಹಾಯ ಕೇಳಬೇಕೇ? ಎಂದು ರೈತರು ಖಾರವಾಗಿ ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಹರಿಯಾಣದ ಸುಮಾರು 70,000 ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ರೈತರ ಅಹವಾಲುಗಳನ್ನು ಕೇಂದ್ರ ಸರಕಾರ ಆಲಿಸಲು ನಿರಾಕರಿಸಿದರೆ ನಾವು ಯಾರ ಬಾಗಿಲನ್ನು ಬಡಿಯಬೇಕು? ಎಂದು ಕಿಡಿಕಾರಿದ್ದಾರೆ. ಯುಪಿ-ದೆಹಲಿ ಗಡಿಯಲ್ಲೇಕೆ ಶಾಂತವಾಗಿ ಸಾಗುತ್ತಿದ್ದ ನಮ್ಮನ್ನು ಯಾಕೆ ತಡೆ ಹಿಡಿದಿದ್ದೀರಿ? ನಮ್ಮ ಪ್ರತಿಭಟನೆಯೂ ಯಾವುದೇ ಗೊಂದಲಗಳಿಲ್ಲದೆ ಶಿಸ್ತಿನಿಂದ ಸಾಗುತ್ತಿತ್ತು. ಆದರೆ ಇದೀಗ ತಡೆಹಿಡಿಯಲಾಗಿದೆ., ನಮ್ಮ ಸಮಸ್ಯೆಗಳನ್ನು ಸರ್ಕಾರದ ಕೇಳದೆ ಕಿವಿಮುಚ್ಚಿಕೊಂಡರೆ ನಾವು ಪಾಕ್ ಅಥವಾ ಬಾಂಗ್ಲಾಕ್ಕೆ ತೆರಳಬೇಕೆ ? ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್ ತಿಕಾಯಿತ್ ಪ್ರಶ್ನಿಸಿದ್ದಾರೆ.
ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ, ವಿದ್ಯುತ್ ಶುಲ್ಕದಲ್ಲಿ ಇಳಿಕೆ, 60 ದಾಟಿದ ಪ್ರತಿಯೋರ್ವ ರೈತರಿಗೆ ಪಿಂಚಣಿ ಮುಂತಾಗಿ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ರಾಜಘಾಟ್ಗೆ ಜಾಥಾ ಕೈಗೊಂಡಿದ್ದರು.