ಉಡುಪಿ, ಅ 02(MSP): ಉಡುಪಿಯ ಪರ್ಕಳ ಪ್ರದೇಶದಲ್ಲಿ ಅ.2 ರ ಮಂಗಳವಾರ ಮತ್ತೆ ಬೂದಿ ಮಿಶ್ರಿತ ಮಳೆ ಯಾಗಿರುವ ಬಗ್ಗೆ ವರದಿಯಾಗಿದೆ. ಮಳೆಯ ಹನಿಯಲ್ಲಿ ಬೂದಿಯ ಅಂಶ ಪತ್ತೆಯಾಗಿದ್ದು, ಮಳೆ ಹನಿ ಬಿದ್ದಲ್ಲೆಲ್ಲ ಬೂದಿಯ ಬಿಳಿಬಣ್ಣದ ಗುರುತುಗಳು ಪತ್ತೆಯಾಗಿದೆ. ದ್ವಿ ಚಕ್ರ ವಾಹನ, ಕಾರುಗಳ ಮೇಲೆ ಬಿಳಿ ಬಣ್ಣದ ಮಳೆ ಬಿದ್ದು ಕಲೆ ಮೂಡಿಸಿದೆ.
ಕಳೆದೆರಡು ತಿಂಗಳ ಹಿಂದೆ ಆಗಸ್ಟ್ ಎರಡರಂದೂ ಉಡುಪಿಯ ಹಲವೆಡೆ ಬೂದಿ ಮಿಶ್ರಿತ ಮಳೆಯಾಗಿತ್ತು. ಇದು ಸಾಕಷ್ಟು ಚರ್ಚೆಗೀಡಾಗಿತ್ತು. ಮಾಹಿತಿ ಹಕ್ಕು ಕಾರ್ಯಕರ್ತ ರಾಜಾರಾಮ್ ತಲ್ಲೂರು ಅವರು , ಮಳೆಯಲ್ಲಿ ಉದುರಿದ ಬಿಳಿಯ ವಸ್ತು ಬೂದಿ ಎಂಬುವುದನ್ನು ಸುರತ್ಕಲ್ ನ ಎನ್ ಐ ಟಿಕೆ ರಾಸಾಯನಿಕ ಎಂಜಿಯರಿಂಗ್ ವಿಭಾಗ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ ಎಂದು ಪತ್ರಿಕಾಗೋಷ್ಟಿ ನಡೆಸಿ ನಿಜಾಂಶ ಬಹಿರಂಗಪಡಿಸಿದ್ದರು. ಆಗಸ್ಟ್ 3, 4 ರಂದು ಸುರಿದ ಬೂದಿ ಮಿಶ್ರಿತ ಮಳೆಯಲ್ಲಿ ರಾಸಯನಿಕ ಅಂಶಗಳಿತ್ತು ಎಂದು ಅವರು ಆರೋಪಿಸಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿ ಸಂಗ್ರಹಿಸಿದ ಮಾದರಿಯಲ್ಲಿ ಅದರ ಅದರ ತೂಕದ 71.43 ಶೇಕಡಾ ಬೂದಿ, 12.51 ಶೇಕಡಾ ಫಿಕ್ಸೆಡ್ ಕಾರ್ಬನ್, 10.92 ಶೇಕಡಾ ವಲಟೈಲ್ರಾಸಾಯನಿಕಗಳು ಮತ್ತು 5.09 ಶೇಕಡಾ ತೇವಾಂಶ ಇತ್ತು ಎಂದು ವರದಿ ಬಹಿರಂಗಗೊಳಿಸಿದ್ದರು.
ಇದೀಗ ಎರಡು ತಿಂಗಳ ಬಳಿಕ ಅಂತಹದ್ದೇ ಮಳೆ ಪುನರಾವರ್ತನೆ ಯಾಗಿದೆ. ಈ ಬಗ್ಗೆ ಸ್ಥಳೀಯರಲ್ಲಿ ಅನುಮಾನ ಉಂಟಾಗಿದ್ದು, ಪಡುಬಿದ್ರೆಯಲ್ಲಿ ಕಾರ್ಯಾಚರಿಸುತ್ತಿರುವ ಉಷ್ಣವಿದ್ಯುತ್ ಸ್ಥಾವರದ ಹಾರು ಬೂದಿಯ ಪರಿಣಾಮ ಈ ರೀತಿ ಆಗುತ್ತಿದೆ ಎನ್ನುವ ಮಾತುಗಳು ಕೇಳಿ ಬರಲು ಆರಂಭಿಸಿದೆ.