ಪುತ್ತೂರು, ಅ 7: ಪುತ್ತೂರು ಪಿಎಸ್ಐ ವಿರುದ್ದ ಅವಮಾನಕಾರಿ ಹೇಳಿಕೆ ನೀಡಿ ಬಂಧನವಾಗಿದ್ದ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತ್ಗೆ ಜಾಮೀನು ಮಂಜೂರಾಗಿದೆ.
ಕೆಲ ದಿನಗಳ ಹಿಂದೆ ಜಗದೀಶ್ ಕಾರಂತ್ ಅವರಿಗೆ ಪುತ್ತೂರು ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿತ್ತು. ಇದೀಗ ಕಾರಂತ್ ಅವರ ಜಾಮೀನು ಅರ್ಜಿ ವಿಚಾರಿಸಿದ ಪುತ್ತೂರು ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಘಟನೆಯ ಹಿನ್ನೆಲೆ:
ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಕೋಮು ಪ್ರಚೋದನಾಕಾರಿಯಾಗಿ ಪೊಲೀಸರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿ, ಬೆದರಿಕೆ ಒಡ್ಡಿದ ಆರೋಪದಲ್ಲಿ ಜಗದೀಶ್ ಕಾರಂತ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿತ್ತು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ದ ಹಿಂಜಾವೇ ಕ್ಷೇತ್ರೀಯ ಪ್ರಧಾನ ಕಾರ್ಯದರ್ಶಿ ಕಾರಂತ್, ಗ್ರಾಮಾಂತರ ಠಾಣಾ ಎಸ್ಸೈ ಅಬ್ದುಲ್ ಖಾದರ್, ಎಎಸೈ ರುಕ್ಮಾ ಹಾಗೂ ಚಂದ್ರ ಅವರನ್ನು ಹೀಯಾಳಿಸಿ ಮಾತನಾಡಿದ್ದರು. ಅಲ್ಲದೆ ಪೊಲೀಸರು ಹಿಂದೂಗಳನ್ನು ದಮನಿಸುವ ಕೃತ್ಯವನ್ನು ಮಾಡುತ್ತಿದ್ದಾರೆ. ಪೊಲೀಸರು ಇದೇ ರೀತಿ ಮುಂದುವರಿದಲ್ಲಿ ಪುತ್ತೂರನ್ನು ಹಳೆಯ ಸುರತ್ಕಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು.