ಉಡುಪಿ, ಅ 02(MSP): ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಗೆ ಕಾಂಗ್ರೆಸ್ ಕಾರ್ಯಕರ್ತರೇ ಮುತ್ತಿಗೆ ಹಾಕಿ , ಭಾರತ್ ಬಂದ್ ಸಂದರ್ಭ ಪೊಲೀಸರ ಲಾಠಿ ಚಾರ್ಜ್ ಬಗ್ಗೆ ಯಾವುದೇ ನಿಲುವನ್ನು ತಾಳದ ಸಚಿವೆ ಕ್ರಮವನ್ನು ಖಂಡಿಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಅ.02 ರ ಮಂಗಳವಾರ ನಡೆದಿದೆ.
ಮಂಗಳವಾರ ಸಂಜೆ 4 ಗಂಟೆಗೆ ನಡೆಯಬೇಕಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಸಚಿವೆ ಜಯಮಾಲ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದರು. ಈ ಸಂದರ್ಭ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಎತ್ತಂಗಡಿಗೆ ಸಚಿವೆ ಜಯಮಾಲ ಅವರನ್ನು ಕಾಂಗ್ರೇಸ್ ಕಾರ್ಯಕರ್ತರು ಒತ್ತಾಯಿಸಿದರು.
ಭಾರತ್ ಬಂದ್ ಸಂದರ್ಭ ನಡೆದ ಗಲಾಟೆಯಲ್ಲಿ ಸ್ವತಃ ಪೊಲೀಸ್ ವರಿಷ್ಠಾಧಿಕಾರಿಯೇ ಕಾಂಗ್ರೇಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದರು. ಜಿಲ್ಲೆಯ ಉಸ್ತುವಾರಿ ಸಚಿವೆ ಆಗಿರುವ ಜಯಮಾಲಾ ಲಾಠಿಚಾರ್ಜ್ ಆದಾಗ ಕಾಂಗ್ರೆಸ್ ಕಾರ್ಯಕರ್ತರ ಕಷ್ಟಗಳಿಗೆ, ನೋವುಗಳಿಗೆ ಯಾವುದೇ ರೀತಿಯಲ್ಲಿ ಸ್ವಂದಿಸಿಲ್ಲ. ಕಾರ್ಯಕರ್ತರು ಆಸ್ಪತ್ರೆ ಗೆ ದಾಖಲಾದರೂ ಅವರ ಆರೋಗ್ಯ ವಿಚಾರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಕಷ್ಟಗಳಿಗೆ ಸ್ಪಂದಿಸದ ನೀವು ಗಣೇಶ ಹಬ್ಬದಂದು ಎಸ್ ಪಿ ಮನೆಗೆ ಊಟ ಮಾಡಲು ಹೋಗಿದ್ದಿರಿ ಎಂದು ಜಯಮಾಲ ವಿರುದ್ದ ಕಾರ್ಯಕರ್ತರು ಆರೋಪಗಳ ಸುರಿಮಳೆಗೈದರು. ಸ್ವಪಕ್ಷೀಯರಿಂದಲೇ ಘೇರಾವ್ ಹಾಕಿಸಿಕೊಂಡ ಸಚಿವೆ ಜಯಮಾಲಗ ತೀವ್ರ ಮುಜುಗರಕ್ಕೆ ಒಳಗಾಗಿ ಕಾರ್ಯಕರ್ತರ ಆಕ್ರೋಶಕ್ಕೆ ಸಮಜಾಯಿಷಿ ನೀಡಲು ಮುಂದಾದರು. ಆದರೆ ಸಚಿವೆಯ ಮಾತಿಗೆ ತಣ್ಣಗಾಗದೆ ಕಾರ್ಯಕರ್ತರು ವಾಗ್ವಾದ ಮುಂದುವರಿಸಿದರು.
ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಜಯಮಾಲ ನನ್ನನ್ನು ಹೆದರಿಸಲು ಬರಬೇಡಿ, ನನಗೆ ತುಂಬಾ ಕೋಪ ಬರುತ್ತೆ ಎಂದು ಕಾರು ಹತ್ತಿ ಸಚಿವೆ ಕಾಂಗ್ರೆಸ್ ಕಚೇರಿಯಿಂದ ಸರ್ಕೀಟ್ ಹೌಸ್ ಗೆ ಅವಸರವಾಗಿ ಹೊರಟುಹೋದರು.
ಇದಕ್ಕೂ ಮೊದಲು ಮಾದ್ಯಮದೊಂದಿಗೆ ಮಾತನಾಡಿದ ಸಚಿವೆ, ನಮ್ಮ ಪಕ್ಷದ ಮುಖಂಡ ಹಾಗೂ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿದ ಬಗ್ಗೆ ಎಸ್ಪಿ ಅವರನ್ನು ಈ ಹಿಂದೆಯೇ ಪ್ರಶ್ನಿಸಿದ್ದೇನೆ. ಅವರು ಈಗಾಗಲೇ ಪರಿಸ್ಥಿಯನ್ನು ಹತೋಟಿಗೆ ತರಲು ಲಾಠಿ ಚಾರ್ಜ್ ನಡೆಸಿದ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿ ಅಲ್ಲಿಂದ ಹೊರನಡೆದರು.