ನವದೆಹಲಿ,ಅ 03 (MSP): ಎಐಸಿಸಿ ಸಾಮಾಜಿಕ ಮಾಧ್ಯಮ ಘಟಕದ ಮುಖ್ಯಸ್ಥೆ ಸ್ಥಾನಕ್ಕೆ ನಟಿ ರಮ್ಯಾ ರಾಜೀನಾಮೆ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಇದನ್ನು ಮಾಜಿ ಸಂಸದೆ ರಮ್ಯಾ ತಳ್ಳಿಹಾಕಿದ್ದಾರೆ. ಅಂದಹಾಗೆ ಇವರ ಅಧಿಕಾರಾವಧಿ ಸೆ.29 ಕ್ಕೆ ಮುಕ್ತಾಯಗೊಂಡಿದ್ದು, ಎಐಸಿಸಿಯೂ ಹುದ್ದೆಯನ್ನು ನವೀಕರಿಸಬೇಕಾಗಿತ್ತು. ಇದಲ್ಲದೆ ಟ್ವಿಟರ್ ಹಾಗೂ ಫೇಸ್ ಬುಕ್ ಖಾತೆಯಲ್ಲೂ ಅ.03 ರ ಮುಂಜಾನೆಯಿಂದ ರಮ್ಯಾ ಅವರ ಬಯೋಡೆಟಾ ಕಾಣಿಸದಾಗಿತ್ತು. ಹೀಗಾಗಿ ಈ ವದಂತಿಗೆ ಇನ್ನಷ್ಟು ಪುಷ್ಠಿ ಸಿಕ್ಕಿತ್ತು.
ಆದರೆ ಇದಕ್ಕೆಲ್ಲಾ ಸ್ಪಷ್ಟನೆ ನೀಡಿರುವ ಮಾಜಿ ಸಂಸದೆ ನಟಿ ರಮ್ಯಾ, ನಾನು ರಜೆಯ ಮೇಲಿದ್ದು ನನ್ನ ಹುದ್ದೆಗೆ ರಾಜೀನಾಮೆ ನೀಡಿಲ್ಲ. ನಾಳೆಯೇ ನವದೆಹಲಿಗೆ ಹಾಜರಾಗಿ ಪಕ್ಷದ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಟ್ವಿಟರ್ ನಲ್ಲಿ ತಾಂತ್ರಿಕ ಸಮಸ್ಯೆಯುಂಟಾಗಿ ತನ್ನ ಬಯೋಡೆಟಾ ಕಾಣಿಸಿಕೊಳ್ಳುತ್ತಿರಲಿಲ್ಲ ಅಷ್ಟೇ ಎಂದಿದ್ದಾರೆ.
ಅತಿ ವೇಗವಾಗಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಸ್ಥಾನಕ್ಕೆ ಬಡ್ತಿ ಪಡೆದಿದ್ದ ನಟಿ, ಮಾಜಿ ಸಂಸದೆ ಇನ್ನೊಂದೆಡೆ ರಾಜ್ಯ ರಾಜಕಾರಣಕ್ಕೆ ಮರಳುವ ಸಾಧ್ಯತೆಗಳ ಬಗ್ಗೆಯೂ ವದಂತಿಗಳು ಹರಿದಾಡುತ್ತಿದ್ದು, ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ವಿರುದ್ಧ ಸ್ಪರ್ಧೆಗಿಳಿಯುತ್ತಾರೆ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ.