ಮಂಗಳೂರು, ಅ 3(SM): ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ ನಾವು ಬದ್ದರಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಕಾಮಗಾರಿಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ನಗರದಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುವುದು. ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಸೂಕ್ತ ತಂಡ ರಚಿಸಲಾಗುವುದು. ಝೀರೋ ಟ್ರಾಫಿಕ್ ಝೋನ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದ ಅವರು ಅಕ್ಟೋಬರ್ ೧೦ರಂದು ಸ್ಮಾರ್ಟ್ ಸಿಟಿ ಕುರಿತು ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಇನ್ನು ನಗರದ ಕೂಳೂರು ಸೇತುವೆಯ ಕಾಮಗಾರಿ ಶೀಘ್ರ ಆರಂಭಗೊಳಿಸಲಾಗುವುದು. ಕಾಮಗಾರಿ ಸಂದರ್ಭದಲ್ಲಿ ಹಳೆಯ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಕಾಮಗಾರಿ ವೇಳೆ ಒಂದು ಸೇತುವೆ ಮೂಲಕ ಸಂಚಾರಕ್ಕೆ ಮಾತ್ರ ಅವಕಾಶಕೊಡಲಾಗುವುದು. ಜಿಲ್ಲೆಯ ಜನರು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕು. ಈ ಬಗ್ಗೆ ಅಧಿಕಾರಿಗಳ ಸಭೆ ನಡೆದಿದೆ ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದೆಂದು ಅವರು ತಿಳಿಸಿದ್ದಾರೆ.