ಮಂಗಳೂರು, ಅ 3(SM): ಬಜ್ಪೆ ಕೈಕಂಬ ನಿವಾಸಿ ಹರೀಶ್ ಶೆಟ್ಟಿ ಎಂಬುವವರ ಮೇಲೆ ನಡೆದ ಮಾರಣಾಂತಿಕ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೊಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಬಂಟ್ವಾಳ ತಾಲೂಕಿನ ಅಮ್ಮಂಜೆ ಗ್ರಾಮದ ಮೊಹಮ್ಮದ್ ಶರೀಫ್, ಬಜಪೆಯ ಕಂದಾವರ ಗ್ರಾಮದ ಶಿಫಾಜ್ ಹಾಗೂ ಮಹಮ್ಮದ್ ಆರಿಫ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಕೃತ್ಯದ ಸಂದರ್ಭ ಬಳಸಿದ ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಸೆಪ್ಟೆಂಬರ್ 24ರಂದು ರಾತ್ರಿ ಹರೀಶ್ ಶೆಟ್ಟಿ ತಮ್ಮ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕೈಕಂಬ ಸಮೀಪದ ಸೊರಲ್ಪಾಡಿ ಎಂಬಲ್ಲಿ ಆರೋಪಿಗಳು ಹರೀಶ್ ರನ್ನು ಅಡ್ಡಗಟ್ಟಿದ್ದಾರೆ. ಅಲ್ಲದೆ, ಹರೀಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ. ಹಾಗೂ ಸ್ಥಳದಿಂದ ಆರೋಪಿಗಳು ಪರಾರಿಯಾಗಿದ್ದಾರೆ.
ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಣಮಿಸಿದ ಮಂಗಳೂರು ನಗರ ಉತ್ತರವಿಭಾಗ ಪಣಂಬೂರು ರೌಡಿ ನಿಗ್ರಹ ದಳದವರು ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಸದ್ಯ ಆರೋಪಿಗಳನ್ನು ಪತ್ತೆ ಹಚ್ಚಿ ಬಂದಿಸಿರುವ ತಂಡ ಬಜ್ಪೆ ಠಾಣಾ ಪೊಲೀಸರಿಗೆ ಆರೋಪಿಗಳನ್ನು ಹಸ್ತಾಂತರಿಸಿದ್ದಾರೆ.
ಬಜ್ಪೆ ಠಾಣಾ ಪೊಲೀಸರು ತನಿಖೆ ಮುನ್ನಡೆಸಿದ್ದಾರೆ.