ಸಿರುಗುಪ್ಪ, 04 ಅ (MSP) : ನೆರೆಯ ಅಂಧ್ರಪ್ರದೇಶ ಗಡಿಭಾಗದಲ್ಲಿರುವ ಸಂತೆಕಾಡ್ಲೂರಿನ ಗ್ರಾಮದಲ್ಲಿ ಖಾದ್ರಿ ಕುಟುಂಬವೊಂದಿದೆ. ಈ ಕುಟುಂಬ ಶಾಸ್ತ್ರ ಹೇಳುವುದರಲ್ಲೇ ಖ್ಯಾತಿ ಪಡೆದಿದೆ. ಇಲ್ಲಿಗೆ ಜಾತಿ ಮತಗಳ ಅಂತರವಿಲ್ಲ ಎಲ್ಲಾ ಧರ್ಮಿಯರೂ ಬರುತ್ತಾರೆ. ಎಲ್ಲರಿಗೂ ಈ ಕುಟುಂಬದ ಹಿರಿಯರು ಸಾಂತ್ವನ ಹೇಳಿ ಕಳುಹಿಸುತ್ತಾರೆ. ತನ್ನ ಪೂರ್ವಿಕರಿಂದಲೂ ಬಂದ ವಿದ್ಯೆಯನ್ನು ನಿಯಮಬದ್ದವಾಗಿ ಕಲಿಯಲು ಇದೇ ಕುಟುಂಬ ಈಗಿನ ತಲೆಮಾರಿನ ಮಹಮ್ಮದ್ ಆಲಿ ಯೋಚಿಸುತ್ತಾರೆ.
ಕನಸನ್ನು ನನಸು ಮಾಡಿದ ಮಹಮ್ಮದ್ ಅಲಿ ಖಾದ್ರಿ ಈಗ ಅಪ್ಪಟ ಜ್ಯೋತಿಷಿಯಾಗಿದ್ದಾರೆ. ಹಿಂದಿನಿಂದಲೂ ಮನೆಯಲ್ಲಿ ಹೇಳಲಾಗುತ್ತಿದ್ದ ಶಾಸ್ತ್ರದ ಬಗ್ಗೆ ತೃಪ್ತಿಯಿಲ್ಲದ ಈ ಮುಸ್ಲಿಂ ಯುವಕ ತಾನೇ ಖುದ್ದಾಗಿ ಜ್ಯೋತಿಷ್ಯ ಕೋರ್ಸ್ ಗೆ ಸೇರಿ ವೈಜ್ಞಾನಿಕವಾಗಿ ಜ್ಯೋತಿಷ್ಯ ತಿಳಿಸಲು ರೆಡಿಯಾಗಿದ್ದಾರೆ.
ಮಹಮ್ಮದ್ ಅಲಿ ಖಾದ್ರಿ, ವೈಜ್ಞಾನಿಕವಾಗಿ ಜ್ಯೋತಿಷ್ಯ ಅಭ್ಯಾಸಿಸುವ ಉದ್ದೇಶದಿಂದ ಮಾಯಕಾರ ಗುರು ಕುಲದಲ್ಲಿ ಪ್ರವೇಶ ಪಡೆದಿದ್ದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ನೋಂದಾಯಿತ ಗುರುಕುಲದಲ್ಲಿ ಡಾ. ಚಂದ್ರ ಶೇಖರ್ ಬಣಗಾರ್ ಮಾರ್ಗದರ್ಶನ ನೀಡಿದ್ದಾರೆ. ಪಿಯುಸಿ ಬಳಿಕ ಅಲಿ ಜ್ಯೋತಿಷ್ಯ ಶಾಸ್ತ್ರದತ್ತ ಮುಖ ಮಾಡಿದ್ದರು. ಕಳೆದ ಜುಲೈನಲ್ಲಿ ನಡೆದ ಪರೀಕ್ಷೆಯಲ್ಲಿ ಶೆ.೬೧.೨೫ ಅಂಕ ಗಳಿಸಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಪರಿಚಯ ವಿಷಯದಲ್ಲಿ ೧೦೦ಕ್ಕೆ ೬೪ ಅಂಕ ಗಳಿಸಿದ್ದಾರೆ.